ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಏಷ್ಯಾಕಪ್‌ಗೆ ಮಧ್ಯಮ ಕ್ರಮಾಂಕದ ಆಟಗಾರನಾಗಿ ಆಯ್ಕೆ ಆಗಿದ್ದಾರೆ. ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ 4 ಮತ್ತು 5ನೇ ಸ್ಥಾನಕ್ಕೆ ಆಟಗಾರನ ಹುಡುಕಾಟ ಮುಂದುವರೆದಿದ್ದು, ಯುವ ಎಡಗೈ ಪ್ರತಿಭೆಗೆ ಏಷ್ಯಾಕಪ್ನಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡುವ ಅವಕಾಶ ಸಿಕ್ಕಿದೆ.
ಅಗರ್ಕರ್ ಪ್ರತಿಕ್ರಿಯಿಸಿ, "ತಿಲಕ್ ವರ್ಮಾ ಭರವಸೆ ಮೂಡಿಸಿದ್ದಾರೆ. ಏಷ್ಯಾ ಕಪ್ ಅವರಿಗೆ ದೊಡ್ಡ ಅವಕಾಶ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಪ್ರದರ್ಶನ ಮಾತ್ರವಲ್ಲದೇ ಅವರ ಬ್ಯಾಟಿಂಗ್ ಶೈಲಿಯಿಂದಾಗಿಯೂ ತಂಡಕ್ಕೆ ಆಯ್ಕೆ ಆಗಿದ್ದಾರೆ. ಅವರು ಎಡಗೈ ಬ್ಯಾಟರ್ ಎಂಬುದೂ ಸಹ ಗಮನಾರ್ಹ ವಿಷಯ. ಇವೆಲ್ಲವೂ ಅವರ ಆಯ್ಕೆಗೆ ಕಾರಣ" ಎಂದು ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ವೆಸ್ಟ್ ಇಂಡೀಸ್ 5 ಟಿ20 ಸರಣಿಯಲ್ಲಿ ತಿಲಕ್ ವರ್ಮಾ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದ್ದರು. ಮೊದಲೆರಡು ಪಂದ್ಯದಲ್ಲಿ ಇತರೆ ಬ್ಯಾಟರ್ಗಳು ವಿಫಲವಾದರೂ, ತಿಲಕ್ ಮಾತ್ರ ಶಾಂತಚಿತ್ತತೆ ಮತ್ತು ಪ್ರಬುದ್ಧತೆಯಿಂದ ಬ್ಯಾಟ್ ಬೀಸಿ ರನ್ ಕಲೆಹಾಕಿದ್ದರು. ವಿಂಡೀಸ್ನ ಐದು ಪಂದ್ಯಗಳಲ್ಲಿ 57.66 ರ ಸರಾಸರಿಯಲ್ಲಿ 139 ಸ್ಟ್ರೈಕ್ ರೇಟ್ನಿಂದ ಒಂದು ಅರ್ಧಶತಕಸಹಿತ 173 ರನ್ ಗಳಿಸಿದ್ದಾರೆ.
ಹಾರ್ದಿಕ್ ಆಲ್‌ರೌಂಡರ್ ಪ್ರದರ್ಶನ: ಏಷ್ಯಾಕಪ್‌ಗೆ ಉಪನಾಯಕನಾಗಿ ಆಯ್ಕೆ ಆಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾತ್ರ ಹಾಗೆಯೇ ಇರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. "ಹಾರ್ದಿಕ್ ವರ್ಷಗಳಿಂದ ತಂಡದಲ್ಲಿ ಆಲ್‌ರೌಂಡರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡಬಲ್ಲರು" ಎಂದಿದ್ದಾರೆ.
2023ರ ಏಷ್ಯಾ ಕಪ್‌ಗೆ ಪಾಕಿಸ್ತಾನ ಮತ್ತು ಶ್ರೀಲಂಕಾ ಸಹ-ಆತಿಥ್ಯ ವಹಿಸಲಿದ್ದು, ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಟೂರ್ನಿ ನಡೆಯಲಿದೆ. ಭಾರತ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಶಿಖರ್ ಧವನ್ ವಿಚಾರ: ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಮಹತ್ವದ ಏಷ್ಯಾಕಪ್ನಿಂದ ಕೈಬಿಡಲಾಗಿದೆ. ಈ ಬಗ್ಗೆ ಮಾತನಾಡಿದ ಅಗರ್ಕರ್, "ಶಿಖರ್ ಧವನ್ ಅವರ ದಾಖಲೆಗಳ ಬಗ್ಗೆ ಗೊತ್ತಿದೆ. ಅವರು ಉತ್ತಮ ಆರಂಭಿಕ ಆಟಗಾರ. ಆದರೆ ಸದ್ಯ ನಮ್ಮಲ್ಲಿ ರೋಹಿತ್, ಶುಭಮನ್, ಕಿಶನ್ ಮೂವರು ಆರಂಭಿಕರಿದ್ದಾರೆ. ತ್ರಿವಳಿಗಳು ಕಳೆದ ಕೆಲ ವರ್ಷಗಳಿಂದ ಲಯದಲ್ಲಿದ್ದಾರೆ. ಹೀಗಾಗಿ ಇವರನ್ನೇ ಮುಂದುವೆರೆಸಲಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:India Asia Cup 2023 Squad: ತಂಡಕ್ಕೆ ಮರಳಿದ ರಾಹುಲ್, ಅಯ್ಯರ್.. ಏಷ್ಯಾಕಪ್ನಲ್ಲಿ ಏಕದಿನಕ್ಕೆ ತಿಲಕ್ ಪದಾರ್ಪಣೆ