ಇಸ್ಲಾಮಾಬಾದ್ (ಪಾಕಿಸ್ತಾನ) :ಶ್ರೀಲಂಕಾ, ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವ ಏಷ್ಯಾ ಕಪ್ ಟೂರ್ನಿಯ ಶ್ರೀಲಂಕಾ ಚರಣದ ಟಿಕೆಟ್ ಮಾರಾಟ ಇಂದಿನಿಂದ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯಿಂದ ಪ್ರೇಕ್ಷಕರಿಗೆ ಟಿಕೆಟ್‌ಗಳು ಲಭ್ಯವಿರಲಿವೆ ಎಂದು ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಹೇಳಿದೆ.
ಟಿಕೆಟ್‌ಗಳು pcb.bookme.pk ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ. ಅಭಿಮಾನಿಗಳು ಆನ್ಲೈನ್ ಮೂಲಕ ಟಿಕೆಟ್ ಪಡೆದುಕೊಳ್ಳಬಹುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿವೆ.
ಏಷ್ಯಾಕಪ್ ಟೂರ್ನಿಯ ಶ್ರೀಲಂಕಾ ಚರಣವು ಆಗಸ್ಟ್ 31 ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮೂಲಕ ಆರಂಭವಾಗಲಿದೆ. ಸೆಪ್ಟೆಂಬರ್ 2 ರಂದು ಪಾಕಿಸ್ತಾನ ಮತ್ತು ಭಾರತದ ನಡುವಿನ ಬಹು ನಿರೀಕ್ಷಿತ ಪಂದ್ಯ, ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳು ಲಂಕಾ ನೆಲದಲ್ಲಿ ನಡೆಯಲಿವೆ.
ಕಳೆದ ವಾರದಿಂದ ಪಾಕಿಸ್ತಾನ ಚರಣದ ಏಷ್ಯಾಕಪ್ ಪಂದ್ಯಗಳ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಆತಿಥೇಯ ಪಾಕಿಸ್ತಾನವು ಆಗಸ್ಟ್ 30 ರಂದು ನೇಪಾಳದೊಂದಿಗೆ ಮುಲ್ತಾನ್ ಮೈದಾನದಲ್ಲಿ ಆಡುವ ಮೂಲಕ ಟೂರ್ನಿ ಆರಂಭಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಅವರು ಜುಲೈ 19 ರಂದು ಏಷ್ಯಾ ಕಪ್- 2023 ರ ವೇಳಾಪಟ್ಟಿಯನ್ನು ಪ್ರಕಟಿಸಿದರು. ಪಂದ್ಯಾವಳಿಗೆ ಆಗಸ್ಟ್ 30 ರಂದು ಚಾಲನೆ ಸಿಗಲಿದೆ.