ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಗೆ ಸಂಬಂಧಿಸಿದಂತೆ ನಿನ್ನೆ (ಭಾನುವಾರ) ಎಲ್ಲಾ 10 ತಂಡಗಳು ಆಟಗಾರರ ರಿಟೈನ್ ಮತ್ತು ರಿಲೀಸ್ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಳೆದ ಎರಡು ಸೀಸನ್ ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮರಳಿ ತಮ್ಮ ಹಳೆಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನೀತಾ ಎಂ ಅಂಬಾನಿ, ಹಾರ್ದಿಕ್ ಅವರನ್ನು ಮರಳಿ ಮನೆಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ತಂಡದ ಯುವ ಆಟಗಾರಾನಗಿ ಜರ್ನಿ ಆರಂಭಿಸಿದ ಹಾರ್ದಿಕ್ ಇಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದಾರೆ. ಹಾರ್ದಿಕ್ ತಂಡಕ್ಕೆ ಮರಳಿರುವುದು ಕುಟುಂಬದೊಂದಿಗಿನ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ ಎಂದು ಹೇಳಿದ್ದಾರೆ.
ಆಕಾಶ್ ಅಂಬಾನಿ ಮಾತನಾಡಿ, ಹಾರ್ದಿಕ್ ಅವರನ್ನು ಮರಳಿ ಮುಂಬೈ ತಂಡದಲ್ಲಿ ನೋಡುವುದು ನನಗೆ ತುಂಬಾ ಸಂತೋಷವಾಗಿದೆ. ಅವರು ಆಡುವ ಯಾವುದೇ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ಹೇಳಿದರು. ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ತಂಡದ ಜೆರ್ಸಿ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಅಭಿಮಾನಿಗಳು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ ನಾಯಕತ್ವ: ಹಾರ್ದಿಕ್ ಪಾಂಡ್ಯ 2022ರಲ್ಲಿ ಹೊಸ ತಂಡ ಗುಜರಾತ್ ಟೈಟಾನ್ಸ್ನ ನಾಯಕತ್ವ ವಹಿಸಿದ್ದರು. ಈ ಸೀಸನ್ನಲ್ಲಿ ಪಾಂಡ್ಯ 15 ಪಂದ್ಯಗಳಲ್ಲಿ 487 ರನ್ ಗಳಿಸಿದ್ದರು. 4 ಅರ್ಧಶತಕಗಳು ಸೇರಿವೆ. ಅಲ್ಲದೇ ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಚೊಚ್ಚಲ ಬಾರಿಗೆ ಕಪ್ಅನ್ನು ಗೆದ್ದುಕೊಂಡಿತ್ತು. ನಂತರ 2023ರಲ್ಲಿ 16 ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ 346 ರನ್ ಗಳಿಸಿದ್ದರು, ಇದರಲ್ಲಿ 2 ಅರ್ಧಶತಕ ಸೇರಿದ್ದವು. ಈ ಸೀಸ್ನಲ್ಲಿ ಗುಜರಾತ್ ಫೈನಲ್ಗೂ ತಲುಪಿತ್ತು. ಆದರೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಕಂಡು ಕಪ್ ಅನ್ನು ಕೈಚಲ್ಲಿತು.
ಪಾಂಡ್ಯ ಐಪಿಎಲ್ ಹಿಸ್ಟರಿ: ಹಾರ್ದಿಕ್ ಪಾಂಡ್ಯ ಈವರೆಗೆ 123 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 2309 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಸೇರಿವೆ. ಬೌಲಿಂಗ್ನಲ್ಲಿ 53 ವಿಕೆಟ್ಗಳನ್ನು ಉರುಳಿಸಿದ್ದಾರೆ. 17 ರನ್ಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಪಾಂಡ್ಯ 2015ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಋತುವಿನಲ್ಲಿ ಕೇವಲ 3 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ದೊರಕಿತ್ತು. ಈ ವೇಳೆ 112 ರನ್ ಗಳಿಸಿದ್ದರು. ಇದರಲ್ಲಿ ಅರ್ಧಶತಕವೂ ಸೇರಿತ್ತು.
ಇದನ್ನೂ ಓದಿ:ಐಪಿಎಲ್ 2024: ಮುಂಬೈಗೆ ಮರಳಿದ ಹಾರ್ದಿಕ್ ಪಾಂಡ್ಯ; ಗುಜರಾತ್ ಟೈಟಾನ್ಸ್ಗೆ ಗಿಲ್ ನಾಯಕ