ಹೈದರಾಬಾದ್: ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಎಲ್ಲಾ ಕ್ರಿಕೆಟ್ ಸಂಸ್ಥೆಗಳು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನತ್ತ ಗಮನ ಹರಿಸಿದೆ. ತಂಡಗಳಲ್ಲಿ ಪ್ರಯೋಗ ನಡೆಸುತ್ತಿರುವುದಲ್ಲದೇ ಹೊಸಬರಿಗೆ ಮಣೆಹಾಕಿ ವಿಶ್ವಕಪ್ಗೆ ಹೊಸ ತಂಡದ ತಯಾರಿಯ ಕಾರ್ಯಗಳು ನಡೆಯುತ್ತಿದೆ. ವಿಶ್ವಕಪ್ ಮುಗಿದ ಬೆನ್ನಲ್ಲೇ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಕೆಲ ಆಟಗಾರರು ಮಿಂಚಿದ್ದು, 2024ರ ಟಿ20 ವಿಶ್ವಕಪ್ನ ಕದ ತಟ್ಟಿದ್ದಾರೆ. ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.
ರವಿ ಬಿಷ್ಣೋಯ್:ಯುವ ಬಲಗೈ ಸ್ಪಿನ್ನರ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತನ್ನ ಪ್ರಭಾವಶಾಲಿ ಅಂತಾರಾಷ್ಟ್ರೀಯ ಓಟವನ್ನು ಮುಂದುವರೆಸಿದ್ದಾರೆ. ಅವರು ಐದು ಪಂದ್ಯಗಳಲ್ಲಿ 8.20ರ ಎಕಾನಮಿ ದರ ಕಾಯ್ದುಕೊಂಡ ಇವರು, ಒಟ್ಟು ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ ಪವರ್‌ಪ್ಲೇಯಲ್ಲೇ ಬೌಲಿಂಗ್ ಮಾಡಿ ವಿಕೆಟ್ ಪಡೆದು ಮಿಂಚಿದ್ದಾರೆ. ರವಿ ಆಸೀಸ್ ವಿರುದ್ಧದ ಐದು ಪಂದ್ಯ ಸಿರೀಸ್ನಲ್ಲಿ ಸರಣೀ ಶ್ರೇಷ್ಠ ಪ್ರಶಸ್ತಿ ಗೆದ್ದರು.
ಅವರು ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಅನುಭವಿಗಳಿಗೆ ಸ್ಪರ್ಧೆ ನೀಡಲಿದ್ದಾರೆ. ರವಿ ಇದುವರೆಗೆ ಆಡಿದ 21 ಟಿ20 ಗಳಲ್ಲಿ 17.38ರ ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಅವರು 7ಕ್ಕಿಂತ ಹೆಚ್ಚಿನ ಎಕಾನಮಿ ದರ ಹೊಂದಿದ್ದಾರೆ.
ರಿಂಕು ಸಿಂಗ್:ಕಳೆದ ಐಪಿಎಲ್ನಲ್ಲಿ ಮಿಂಚಿದ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದ ರಿಂಕು ಸಿಂಗ್ ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 4 ಪಂದ್ಯಗಳನ್ನು ಆಡಿದ ಅವರು 105 ರನ್ ಕಲೆಹಾಕಿದ್ದಾರೆ. ಆಸೀಸ್ ವಿರುದ್ಧ 2ನೇ ಪಂದ್ಯದಲ್ಲಿ 9 ಬಾಲ್ನಲ್ಲಿ ಅಜೇಯ 31 ರನ್ ಗಳಿಸಿದ್ದರು. ಅಲ್ಲದೇ ನಾಲ್ಕನೇ ಪಂದ್ಯದಲ್ಲಿ ಸಮಯೋಚಿತ 46 ರನ್ನ ಇನ್ನಿಂಗ್ಸ್ ಆಡಿದ್ದರು. ಇವರ ಆಟ ಕಂಡ ಮಾಜಿ ಆಟಗಾರರು ಟೀಮ್ ಇಂಡಿಯಾಕ್ಕೆ ಫಿನಿಶರ್ ಸಿಕ್ಕಿದ್ದಾನೆ ಎಂದು ಹೇಳುತ್ತಿದ್ದಾರೆ. ಭಾರತಕ್ಕೆ ಒಟ್ಟಾರೆ 10 ಪಂದ್ಯಗಳನ್ನು ರಿಂಕು ಸಿಂಗ್ ಆಡಿದ್ದು, ಅದರಲ್ಲಿ 6 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿರುವ ಅವರು 60ರ ಸರಾಸರಿಯಲ್ಲಿ 187.5 ಸ್ಟ್ರೈಕ್ ರೇಟ್ನಿಂದ 180 ರನ್ ಕಲೆಹಾಕಿದ್ದಾರೆ.
ರುತುರಾಜ್ ಗಾಯಕ್ವಾಡ್:ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸ್ಥಾನವನ್ನು ಆರಂಭಿಕರಾಗಿ ರುತುರಾಜ್ ಗಾಯಕ್ವಾಡ್ ಉತ್ತಮವಾಗಿ ನಿರ್ವಹಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕ (123) ಮತ್ತು ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸೀಸ್ ಸರಣಿಯ ಕೊನೆಯ ಪಂದ್ಯದಲ್ಲಿ 10 ರನ್ ಗಳಿಸಿದ ಗಾಯಕ್ವಾಡ್ ಒಟ್ಟಾರೆ ಟಿ20 ಮಾದರಿಯಲ್ಲಿ 4000 ರನ್ ಪೂರೈಸಿದ ಆಟಗಾರ ಆಗಿದ್ದಾರೆ.
ಭಾರತ ತಂಡದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ವಿಶ್ವಕಪ್ ವೇಳೆ ಹಳೆಬರಿಗೆ ಅವಕಾಶ ಸಿಕ್ಕರೆ, ಯಾರೆಲ್ಲಾ ತಂಡದಲ್ಲಿ ಉಳಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಇದನ್ನೂ ಓದಿ:ಭಾರತ ವಿರುದ್ಧದ ಸರಣಿಗೆ ಹರಿಣಗಳ ಪಡೆ ಪ್ರಕಟ: ಬವುಮಾಗೆ ವಿಶ್ರಾಂತಿ ಮಾರ್ಕ್ರಾಮ್ ನಾಯಕತ್ವ