ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ 20 ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಡೆದುಕೊಂಡು ದಕ್ಷಿಣ ಆಫ್ರಿಕಾಕ್ಕೆ 203 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ ಆರಂಭಿಕ ಯಶಸ್ವಿ ಜೈಸ್ವಾಲ್ (60) ಅರ್ಧಶತಕ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ (100) ಸಿಡಿಲಬ್ಬರದ ಶತಕದೊಂದಿಗೆ ತಂಡದ ಮೊತ್ತ 200ರ ಗಡಿ ದಾಟಿದೆ. ದಕ್ಷಿಣ ಆಫ್ರಿಕಾ ಪರ ಕೇಶವ ಮಹಾರಾಜ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಅವರು ಬ್ಯಾಲಿಂಗ್ ಆಯ್ಕೆ ಮಾಡಿಕೊಂಡು ಭಾರತ ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಇಂದು ಕೊನೆ ಟಿ20 ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಮಳೆಯಿಂದ ಮೊದಲ ಪಂದ್ಯ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ಹರಿಣಗಳ ವಿರುದ್ಧ ಮುಗ್ಗರಿಸಿರುವುದರಿಂದ ಭಾರತ ಟಿ20 ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಲು ಬ್ಲೂ ಬಾಯ್ಸ್ ರೆಡಿಯಾಗಿದ್ದಾರೆ. ಆದರೆ, ಭಾರತ ಗೆಲುವು ಸಾಧಿಸಬೇಕಾದಲ್ಲಿ ನಿಯಂತ್ರಿತ ಬೌಲಿಂಗ್ ಪ್ರದರ್ಶನ ಅಗತ್ಯ ಇದೆ. ಎರಡನೇ ಟಿ-20 ಪಂದ್ಯದಲ್ಲಿ ಬೌಲರ್ಗಳು ಧಾರಾಳವಾಗಿ ರನ್ ಬಿಟ್ಟುಕೊಟ್ಟದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.