ಕರ್ನಾಟಕ

karnataka

ETV Bharat / sports

ಪುರುಷರ ಜರ್ಸಿಗೆ ಮರುಹೊಲಿಗೆ, ಸಮೋಸವೇ ಬ್ರೇಕ್‌ಫಾಸ್ಟ್! ಮಹಿಳಾ ಕ್ರಿಕೆಟಿಗರ ಯಾತನೆ ವಿವರಿಸಿದ ವಿನೋದ್‌ ರಾಯ್! - 2017 women world cup

ಖಾಸಗಿ ನಿಯತಕಾಲಿಕೆಯ​ ಜೊತೆಗೆ ತಮ್ಮ ಇತ್ತೀಚಿನ ಪುಸ್ತಕದ ಬಗ್ಗೆ ಮಾತನಾಡಿರುವ ವಿನೋದ್ ರಾಯ್, ತಮ್ಮ ಅಧಿಕಾರವಧಿಯಲ್ಲಿನ ವಿಷಾದದ ಸಂಗತಿಯೊಂದನ್ನು ವಿವರಿಸಿದರು.

Vinod Rai on women's team
Vinod Rai on women's team

By

Published : Apr 18, 2022, 5:17 PM IST

Updated : Apr 18, 2022, 5:29 PM IST

ಮುಂಬೈ: ಸುಪ್ರೀಂಕೋರ್ಟ್ ನೇಮಿಸಿದ್ದ ಬಿಸಿಸಿಐ ಆಡಳಿತಗಾರರ ಸಮಿತಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ನಿವೃತ್ತ ಐಎಎಸ್​ ಅಧಿಕಾರಿ ವಿನೋದ್ ರಾಯ್​, ತಮ್ಮ ಅವಧಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಎದುರಿಸಿದ ಯಾತನಾಮಯ ಘಟನೆಗಳನ್ನು ಬಹಿರಂಗಗೊಳಿಸಿದ್ದಾರೆ. ವಿನೋದ್ ರಾಯ್​ 2017ರಿಂದ 2019ರವರೆಗೆ ಬಿಸಿಸಿಐನ ಸಿಒಎ ಮುಖ್ಯಸ್ಥರಾಗಿದ್ದರು. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ನ​ ಹೆಡ್‌ಕೋಚ್‌ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್​ ಕೊಹ್ಲಿ ನಡುವಿನ ಆಂತರಿಕ ಸಂಘರ್ಷದ ಘಟನಾವಳಿಗಳಿಗೂ ಅವರು ಸಾಕ್ಷಿಯಾಗಿದ್ದರು.

ಇಂತಹ ಸಾಕಷ್ಟು ವಿಷಯಗಳನ್ನು ಅವರು ತಮ್ಮ "ನಾಟ್​ ಜಸ್ಟ್​ ಎ ನೈಟ್​ ವಾಚ್​ಮನ್​; ಮೈ ಇನ್ನಿಂಗ್ಸ್ ವಿಥ್‌ ಬಿಸಿಸಿಐ" ಎಂಬ ಪುಸ್ತಕದಲ್ಲಿ ನಮೂದಿಸಿದ್ದಾರೆ. ಬಹಳ ಮುಖ್ಯವಾಗಿ, ಈ ಹೊತ್ತಿಗೆಯಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಅನುಭವಿಸಿದ ಕೆಲವು ಬೇಸರದ ಘಟನಾವಳಿಗಳನ್ನೂ ಅವರು ದಾಖಲಿಸಿದ್ದಾರೆ.

ಖಾಸಗಿ ನಿಯತಕಾಲಿಕೆಯ​ ಜೊತೆಗೆ ತಮ್ಮ ಪುಸ್ತಕದ ಬಗ್ಗೆ ಮಾತನಾಡುತ್ತಾ ವಿನೋದ್ ರಾಯ್‌, "ನನ್ನ ಅಧಿಕಾರವಧಿಯಲ್ಲಿನ ಏಕೈಕ ವಿಷಾದವೆಂದರೆ ನಾನು ಮಹಿಳಾ ಕ್ರಿಕೆಟ್‌ ಬಗ್ಗೆ ಸಾಕಷ್ಟು ಗಮನಹರಿಸಲಿಲ್ಲ. ಹಿಂದಿನ ಮಹಿಳಾ ಕ್ರಿಕೆಟಿಗರು ಬಳಸುತ್ತಿದ್ದ ಜೆರ್ಸಿಗಳು (ಕ್ರೀಡಾಪಟುಗಳು ಧರಿಸುವ ಸಮವಸ್ತ್ರ) ವಾಸ್ತವವಾಗಿ ಪುರುಷರ ಜರ್ಸಿಯ ಮರು-ಹೊಲಿಗೆಯಾಗಿದ್ದವು. ಇದು ಅತ್ಯಂತ ದುಃಖಕರ ವಿಚಾರ" ಎಂದು ಬೇಸರಿಸಿದರು.

"ಮಹಿಳಾ ಕ್ರಿಕೆಟ್​ಗೆ ಅವರ ಅರ್ಹತೆಗೆ ತಕ್ಕ ಮಹತ್ವ ನೀಡಲಾಗುತ್ತಿದೆ ಎಂದು ನನಗನ್ನಿಸುತ್ತಿಲ್ಲ. ದುರಾದೃಷ್ಟವೆಂದರೆ, 2006ರವರೆಗೂ ದೇಶದಲ್ಲಿ ಮಹಿಳಾ ಕ್ರಿಕೆಟ್​ ಅನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದೇ ಇಲ್ಲ. ಆದರೆ, ಶರದ್​ ಪವಾರ್​ ಅವರು ಪುರುಷ ಮತ್ತು ಮಹಿಳಾ ಕ್ರಿಕೆಟ್​ ಅಸೋಸಿಯೇಷನ್​ ಅನ್ನು ಒಂದುಗೂಡಿಸಿದರು" ಎಂದು ರಾಯ್‌ ಹೇಳುತ್ತಾರೆ.

"ನನ್ನ ಅವಧಿಯಲ್ಲಿ ಮಹಿಳಾ ಆಟಗಾರರಿಗೆ ಪುರುಷರ ಸಮವಸ್ತ್ರವನ್ನು ಕತ್ತರಿಸಿ ಮತ್ತೆ ಹೊಲಿಗೆ ಹಾಕಲಾಗುತ್ತಿದೆ ಎಂದು ತಿಳಿದು ತೀವ್ರ ಬೇಸರವಾಯಿತು. ಈ ಸಂದರ್ಭದಲ್ಲಿ ನಾನು, ನೈಕಿ ಕಂಪನಿಗೆ ಕರೆ ಮಾಡಿ, ಇದು ಸರಿಯಲ್ಲ. ಮಹಿಳಾ ಆಟಗಾರ್ತಿಯರ ಜೆರ್ಸಿ ವಿನ್ಯಾಸವೇ ವಿಭಿನ್ನವಾಗಿರುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಬೇಕಾಗಿತ್ತು" ಎಂದು ವಿಷಾದಿಸಿದರು.

"ತರಬೇತಿ, ಕೋಚಿಂಗ್ ಮತ್ತು ಪ್ರಯಾಣ ಸೌಲಭ್ಯಗಳು ಹಾಗು ಅಂತಿಮವಾಗಿ ಪಂದ್ಯಗಳ ಶುಲ್ಕದ ವಿಚಾರದಲ್ಲಿ ತಾವು ಪಡೆಯುವುದಕ್ಕಿಂತ ಹೆಚ್ಚಿನದ್ದನ್ನು ಪಡೆಯಲು ಈ ಹುಡುಗಿಯರು ಅರ್ಹರು ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ. ಆದರೆ ಆ ಸಂದರ್ಭದಲ್ಲಿ ಸಾಕಷ್ಟು ಕೊರತೆಯಾಗಿತ್ತು. ನಾವು ಅದನ್ನು ಸರಿಪಡಿಸಲು ಪ್ರಯತ್ನಿಸಿದ್ದೆವು" ಎಂದು ಹೇಳುತ್ತಾ ರಾಯ್ ಕೊಂಚ ನಿರಾಳರಾದರು.

2017ರ ವಿಶ್ವಕಪ್ ವೇಳೆಯಲ್ಲಿ ಮಹಿಳಾ ಕ್ರಿಕೆಟಿಗರು ಅನುಭವಿಸಿದ ಸಂಕಷ್ಟಗಳನ್ನು ವಿನೋದ್ ರಾಯ್ ಬಹಿರಂಗಪಡಿಸಿದ್ದು, ಹರ್ಮನ್‌ಪ್ರೀತ್ ಕೌರ್​ ಆಸೀಸ್​ ವಿರುದ್ಧ 171 ರನ್​ಗಳಿಸಿದ ನಂತರ ನಾವು ಮಹಿಳಾ ಕ್ರಿಕೆಟ್​ ಕಡೆಗೆ ಗಮನಹರಿಸಿದೆವು ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

"ಹರ್ಮನ್‌ಪ್ರೀತ್ ಕೌರ್​ 2017ರ ಮಹಿಳಾ ವಿಶ್ವಕಪ್​ನಲ್ಲಿ ಅಜೇಯ 171 ರನ್​ಗಳಿಸುವವರೆಗೂ ಮಹಿಳಾ ಕ್ರಿಕೆಟ್ ಕಡೆ​ಗೆ ಗಮನ ಹರಿಸದಿರುವುದಕ್ಕೆ ನನಗೀಗಲೂ ಬೇಸರವಿದೆ. ಆ ಸಂದರ್ಭದಲ್ಲಿ ಹರ್ಮನ್ ನನ್ನೊಂದಿಗೆ ಮಾತನಾಡಿ, "ಸರ್​, ನನಗೆ ಪಂದ್ಯದ ವೇಳೆ ಕಾಲು ಸೆಳೆತವಾಗುತ್ತಿತ್ತು. ಓಡಲಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚು ಸಿಕ್ಸರ್​ಗಳನ್ನೇ ಹೊಡೆದೆ" ಎಂದು ತಿಳಿಸಿದರು. ಅಷ್ಟೇ ಅಲ್ಲ, ಹೋಟೆಲ್​ನಲ್ಲಿ ಅವರಿಗೆ ಸಿಗಬೇಕಾದ ಪೌಷ್ಟಿಕಾಂಶರಹಿತ ಆಹಾರವೂ ಸಿಗಲಿಲ್ಲ. ಆ ದಿನ ಬೆಳಗಿನ ಉಪಹಾರವಾಗಿ ಅವರೆಲ್ಲರೂ ಸಮೋಸವನ್ನೇ ಸೇವಿಸಿದ್ದರು ಎಂದು ನನ್ನ ಬಳಿ ಆಟಗಾರ್ತಿಯರು ಬೇಸರ ತೋಡಿಕೊಂಡಿದ್ದರು" ಎಂಬ ಆಘಾತಕಾರಿ ವಿಚಾರವನ್ನೂ ರಾಯ್​ ನೆನಪಿಸಿದರು.

ರಾಯ್​ ಹೇಳಿರುವಂತೆ, ಭಾರತೀಯ ಕ್ರಿಕೆಟ್​ನಲ್ಲಿ ಮಹಿಳಾ ಆಟಕ್ಕೆ ಹೆಚ್ಚು ಮನ್ನಣೆ ಸಿಕ್ಕಿರಲಿಲ್ಲ. ಆದರೆ 2017ರ ಏಕದಿನ ವಿಶ್ವಕಪ್​ನಲ್ಲಿ ಸ್ಥಿರ ಪ್ರದರ್ಶನ ತೋರಿದ ನಂತರ, ದೇಶದ ಗಮನ ಮಹಿಳಾ ಕ್ರಿಕೆಟ್​ನತ್ತ ಆಕರ್ಷಿತವಾಯಿತು. ಆ ನಂತರ ತಂಡ ಸಾಂಘಿಕ ಪ್ರದರ್ಶನ ತೋರಿದ ತಂಡ 2020ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್, 2021ರ ಆವೃತ್ತಿಯಲ್ಲಿ ಫೈನಲ್​ ಪ್ರವೇಶಿಸಿತು. ಈ ವರ್ಷ ನಡೆದ ಆವೃತ್ತಿಯಲ್ಲೂ ಅತ್ಯುತ್ತಮ ಆಟವಾಡಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟಿಗರು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಕೂಡಾ ಪುರುಷರ ಕ್ರಿಕೆಟ್​ಗೆ ನೀಡುತ್ತಿರುವ ಶೇ.10ರಷ್ಟು ಸೌಲಭ್ಯವನ್ನೂ ಮಹಿಳಾ ಕ್ರಿಕೆಟ್​ಗೆ ನೀಡುತ್ತಿಲ್ಲ, ಅದು ವೇತನವೇ ಆಗಿರಬಹುದು ಅಥವಾ ಇನ್ನಿತರ ಸೌಲಭ್ಯವೇ ಆಗಿರಬಹುದು. ಇನ್ನಾದರೂ ಬಿಸಿಸಿಐ ಎಚ್ಚೆತ್ತುಕೊಂಡು ಮಹಿಳಾ ಕ್ರಿಕೆಟ್​​ ಅಭಿವೃದ್ಧಿಗೆ ಪ್ರಯತ್ನಿಸಬೇಕು.

ಇದನ್ನೂ ಓದಿ:'ಕುಂಬ್ಳೆ ಜೊತೆ ಕೊಹ್ಲಿ ಭಿನ್ನಮತದ ಬಗ್ಗೆ ನನ್ನ ಪುಸ್ತಕದಲ್ಲಿ ಉಲ್ಲೇಖಿಸಿಲ್ಲ'

Last Updated : Apr 18, 2022, 5:29 PM IST

ABOUT THE AUTHOR

...view details