ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದಲ್ಲಿ ದೊಡ್ಡ ಹೈಡ್ರಾಮ ನಡೆಯುತ್ತಿದೆ. ಸೋಮವಾರ ಗಾಯದ ಕಾರಣ ರೋಹಿತ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದರೆ, ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಮಗೆ ಏಕದಿನ ಸರಣಿಯಿಂದ ವಿಶ್ರಾಂತಿ ಬಿಸಿಸಿಐ ಕೇಳಿದ್ದಾರೆ.
ಈ ಇಬ್ಬರು ನಾಯಕರ ನಡೆಯನ್ನು ಮಾಜಿ ನಾಯಕ ಅಜರುದ್ದೀನ್ ಪ್ರಶ್ನಿಸಿದ್ದು, ಇದು ತಂಡದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ಟಿ-20 ಮತ್ತು ಏಕದಿನ ಎರಡೂ ಮಾದರಿಗೂ ನಾಯಕರನ್ನಾಗಿ ನೇಮಿಸಿದ್ದರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಗೆಲುವಿನ ಸರಾಸರಿ ಹೊಂದಿದ್ದರೂ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದನ್ನು ಕೆಲವು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದರು.
ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರು ಮೊಹಮ್ಮದ್ ಅಜರುದ್ದೀನ್, ರೋಹಿತ್ ಟೆಸ್ಟ್ ಸರಣಿಯಿಂದ ಹೊರ ಬಿದ್ದಿರುವುದು ಮತ್ತು ಕೊಹ್ಲಿ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸುತ್ತಿರುವುದು ಇಬ್ಬರ ನಡುವೆ ಅನವಶ್ಯಕ ವದಂತಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.