ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲಾರ್ಧದ 7 ಪಂದ್ಯಗಳಲ್ಲಿ 5 ರಲ್ಲಿ ಜಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರ ಆಡಿದ 3 ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಪ್ಲೇ ಆಫ್ ಪ್ರವೇಶಿಸುವ ಹಾದಿಯನ್ನು ಕಠಿಣ ಮಾಡಿಕೊಂಡಿದೆ.
IPL 2022: ಗುಜರಾತ್ ವಿರುದ್ಧ ಆರ್ಸಿಬಿ ಸೋಲಿಗೆ ಕಾರಣವಾದ 3 ಅಂಶಗಳು
ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ 15ನೇ ಆವೃತ್ತಿಯ ಅತ್ಯಂತ ಸ್ಥಿರತೆಯುಳ್ಳ ತಂಡವಾದ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಆರ್ಸಿಬಿ ತೆಗೆದುಕೊಂಡ ಕೆಲವು ನಿರ್ಣಯಗಳು ಮತ್ತು ಕೆಲ ಆಟಗಾರರ ಪ್ರದರ್ಶನ ಕೂಡ ಕಾರಣವಾಗಿವೆ.
Gujarat Titans vs Royal Challengers Bangalore
ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ 15ನೇ ಆವೃತ್ತಿಯ ಅತ್ಯಂತ ಸ್ಥಿರತೆಯುಳ್ಳ ತಂಡವಾದ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್ಗಳ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಆರ್ಸಿಬಿ ತೆಗೆದುಕೊಂಡ ಕೆಲವು ನಿರ್ಣಯಗಳು ಮತ್ತು ಕೆಲವು ಆಟಗಾರರ ಪ್ರದರ್ಶನ ಕೂಡ ಕಾರಣವಾಗಿವೆ.
- ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ಕೆ: ಐಪಿಎಲ್ನ 15ನೇ ಆವೃತ್ತಿಯಲ್ಲಿ 43 ಪಂದ್ಯಗಳಾಗಿದ್ದು, ಒಂದು ಪಂದ್ಯ ಬಿಟ್ಟು ಟಾಸ್ ಗೆದ್ದ ತಂಡಗಳು ಎಲ್ಲಾ ಪಂದ್ಯಗಳಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದವು. ಗುಜರಾತ್ ಟೈಟನ್ಸ್ ಮಾತ್ರ ಒಮ್ಮೆ ಬ್ಯಾಟಿಂಗ್ ಮಾಡಿ ಡಿಫೆಂಡ್ ಕೂಡ ಮಾಡಿಕೊಂಡಿತ್ತು. ಆದರೆ ಆರ್ಸಿಬಿ ನಿರ್ಣಯ ಅಚ್ಚರಿಯಾಗಿತ್ತು. ಏಕೆಂದರೆ ಇದೇ ಮೈದಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 68 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಇದು ತಿಳಿದಿದ್ದರೂ ಮತ್ತೆ ಅದನ್ನೇ ಆಯ್ಕೆ ಮಾಡಿಕೊಂಡಿದ್ದು, ಮೂರ್ಖತನದ ನಿರ್ಧಾರವಾಗಿತ್ತು.
- ವಿರಾಟ್ ಕೊಹ್ಲಿ ನಿಧಾನಗತಿ ಇನ್ನಿಂಗ್ಸ್: ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು. ಮೊದಲ ಓವರ್ನಲ್ಲೇ 2 ಬೌಂಡರಿ ಸಿಡಿಸಿದ್ದ ಅವರು ಒಂದು ಅಂತದಲ್ಲಿ 18 ಎಸೆತಗಳಲ್ಲಿ 24 ರನ್ಗಳಿಸಿದ್ದರು. ಆದರೆ ಮುಂದಿನ 26 ರನ್ಗಳಿಸಲು ಅವರು 27 ಎಸೆತಗಳನ್ನು ತೆಗೆದುಕೊಂಡರು. ಕೊನೆಗೆ 53 ಎಸೆತಗಳಲ್ಲಿ 58 ರನ್ಗಳಿಸಿ 17ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಅವರು ವೇಗವಾಗಿ ರನ್ಗಳಿಸಲು ಪ್ರಯತ್ನಿಸದಿರುವುದು ಒಂದು ಕಾರಣವಾಯಿತು.
- ಶಹಬಾಜ್ ಸ್ಪೆಲ್ ಅಪೂರ್ಣ: ಸತತ 2 ಓವರ್ಗಳಲ್ಲಿ ಶುಬ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಅನುಭವಿಗಳ ವಿಕೆಟ್ ಪಡೆದಿದ್ದ ಶಹಬಾಜ್ ಉತ್ತಮ ರಿದಮ್ ಕಂಡುಕೊಂಡಿದ್ದರೂ ಅವರ ಸ್ಪೆಲ್ ಅಪೂರ್ಣಗೊಳಿಸಿದರು. ಹಸರಂಗ ಮತ್ತು ಶಹಬಾಜ್ ಜೋಡಿ ಟೈಟನ್ಸ್ ತಂಡದ ಬ್ಯಾಟರ್ಗಳನ್ನು ಸತತವಾಗಿ ಪೆವಿಲಿಯನ್ಗಟ್ಟುತ್ತಿದ್ದರೂ ಮಧ್ಯ ಪೇಸರ್ಗಳನ್ನು ತಂದ ನಿರ್ಧಾರ ಆರ್ಸಿಬಿಗೆ ಮಾರಕವಾಗಿ ಪರಿಣಮಿಸಿತು. ಒಂದು ವೇಳೆ ಮಿಲ್ಲರ್ ಅಥವಾ ತೆವಾಟಿಯಾ ಇಬ್ಬರಲ್ಲಿ ಒಬ್ಬರ ವಿಕೆಟ್ ಪಡೆದಿದ್ದರೂ ಈ ಪಂದ್ಯ ಆರ್ಸಿಬಿಯದ್ದಾಗಿರುತ್ತಿತ್ತು.
ಇದನ್ನೂ ಓದಿ:ಆರ್ಸಿಬಿಯಿಂದ ಜಯ ಕಸಿದುಕೊಂಡ ತೆವಾಟಿಯಾ-ಮಿಲ್ಲರ್.. ಪ್ಲೇ ಆಫ್ಗೆ ಹತ್ತಿರವಾದ ಟೈಟನ್ಸ್