ಮುಂಬೈ:ಇಲ್ಲಿನ ಡಾ. ಡಿ ವೈ ಪಾಟೀಲ್ ಮೈದಾನದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ ಭಾರತದ ವನಿತೆಯರು 7 ವಿಕೆಟ್ ಕಳೆದುಕೊಂಡು 410 ರನ್ ಗಳಿಸಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡಿದ್ದರು.
ಭಾರತದ ಆರಂಭಿಕರು ಉತ್ತಮ ಆಟ ಪ್ರದರ್ಶಿಸಲು ವಿಫಲವಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯುತ ಬ್ಯಾಟಿಂಗ್ ತೋರಿದರು. ಭರವಸೆಯ ಆಟಗಾರ್ತಿ ಸ್ಮೃತಿ ಮಂಧಾನಾ 17 ರನ್ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 19 ರನ್ಗೆ ಪೆವಿಲಿಯನ್ ಸೇರಿಕೊಂಡರು. 47 ರನ್ಗೆ ಟೀಂ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಕ್ರೀಸ್ನಲ್ಲಿ ಒಂದಾದ ಶುಭಾ ಸತೀಶ್ ಹಾಗೂ ಜೆಮಿಮಾ ರೋಡ್ರಿಗಸ್ ಮೂರನೇ ವಿಕೆಟ್ಗೆ 115 ರನ್ ಜೊತೆಯಾಟ ಆಡಿದರು. ಶುಭಾ 69 ರನ್ಗೆ ಎಕ್ಲೆಸ್ಟೋನ್ ಬೌಲಿಂಗ್ನಲ್ಲಿ ನ್ಯಾಟ್ ಸ್ಕಿವರ್-ಬ್ರಂಟ್ಗೆ ಕ್ಯಾಚಿತ್ತು ಹೊರನಡೆದರು. ಈ ಮೂಲಕ ಉತ್ತಮ ಜೊತೆಯಾಟ ಅಂತ್ಯಗೊಂಡಿತು. ಬಳಿಕ 68 ರನ್ ಗಳಿಸಿದ್ದ ಜೆಮಿಮಾ ಲಾರೆನ್ ಬೆಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.