ಹೈದರಾಬಾದ್:ಕಳೆದ ವರ್ಷದ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಯ್ಕೆಯಾಗಿದ್ದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ನೆಟ್ಸ್ನಲ್ಲಿ ಅಭ್ಯಾಸ ನಡೆಸಿ, ಕೇವಲ ಬೆಂಚ್ ಕಾಯ್ದಿದ್ದರು.
ಈ ಸಲದ ಮೆಗಾ ಹರಾಜಿನಲ್ಲಿ ಈ ಪ್ಲೇಯರ್ಗೆ ಯಾವುದೇ ತಂಡ ಖರೀದಿ ಮಾಡುವ ಮನಸು ಮಾಡಲಿಲ್ಲ. ಹೀಗಾಗಿ, ಅನ್ಸೋಲ್ಡ್ ಆಗಿದ್ದರು. ಇದರ ಸದುಪಯೋಗ ಪಡೆದುಕೊಂಡ ಪ್ಲೇಯರ್ ಕೌಂಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಫಲವಾಗಿ, ಸದ್ಯ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪೂಜಾರ ವಿರುದ್ಧ ಇನ್ನಿಲ್ಲದ ಟೀಕೆ ವ್ಯಕ್ತವಾಗಿತ್ತು. ಈ ಪ್ಲೇಯರ್ ನಿವೃತ್ತಿ ಘೋಷಣೆ ಮಾಡುವ ಸಮಯ ಬಂದಿದೆ ಎಂಬ ಮಾತು ಸಹ ಕೇಳಿ ಬಂದಿದ್ದವು.
ಇದೇ ಕಾರಣಕ್ಕಾಗಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪೂಜಾರ್ಗೆ ಕೈಬಿಟ್ಟು, ಶ್ರೇಯಸ್ ಅಯ್ಯರ್ಗೆ ಮಣೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ನಡೆದ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿ, ಪೂಜಾರ ಮತ್ತಷ್ಟು ನಿರಾಸೆ ಅನುಭವಿಸಿದ್ದರು.
ಇದನ್ನೂ ಓದಿ:IPL ಪ್ಲೇ - ಆಫ್, ಫೈನಲ್ಗೆ ಹೊಸ ನಿಯಮ.. ಈ ರೀತಿಯಾದರೆ ಪಂದ್ಯ ಆಡದೇ ಆರ್ಸಿಬಿ ಹೊರಕ್ಕೆ!
ಆದರೆ, ಈ ಎಲ್ಲ ಕಷ್ಟ ಮೆಟ್ಟಿನಿಂತ ಬ್ಯಾಟಿಂಗ್ ದಿಗ್ಗಜ ಚೇತೇಶ್ವರ್ ಕೌಂಟಿ ಕ್ರಿಕೆಟ್ನಲ್ಲಿ ರನ್ ಮಳೆ ಹರಿಸಿದರು. ಸಸೆಕ್ಸ್ ತಂಡದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ, ಫಾರ್ಮ್ಗೆ ಮರಳಿದ್ದರು. ತಾವು ಆಡಿರುವ ನಾಲ್ಕು ಪಂದ್ಯಗಳಿಂದ ಎರಡು ಭರ್ಜರಿ ದ್ವಿಶತಕ ಸೇರಿದಂತೆ 720 ರನ್ಗಳಿಕೆ ಮಾಡಿ, ಎಲ್ಲರೂ ಹಿಂತಿರುಗಿ ನೋಡುವಂತೆ ಮಾಡಿದ್ದರು. ಇವರ ಬ್ಯಾಟಿಂಗ್ ಪ್ರದರ್ಶನಕ್ಕೆ ಫಿದಾ ಆದ ಬಿಸಿಸಿಐ ಆಯ್ಕೆ ಸಮಿತಿ ಇಂಗ್ಲೆಂಡ್ ವಿರುದ್ಧದ ಕೊನೆ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದೆ.
ಈ ವಿಚಾರವಾಗಿ ಮಾತನಾಡಿರುವ ಪೂಜಾರ, 'ಐಪಿಎಲ್ನಲ್ಲಿ ಯಾವುದಾದರೂ ಫ್ರಾಂಚೈಸಿ ನನ್ನ ಖರೀದಿ ಮಾಡಿದ್ರೆ, ಕೇವಲ ಬೆಂಚ್ನಲ್ಲಿ ಕೂರಿಸುತ್ತಿತ್ತು. ಆದರೆ, ಇಂಗ್ಲೆಂಡ್ನಲ್ಲಿ ನಡೆದ ಕೌಂಟಿ ಕ್ರಿಕೆಟ್ನಲ್ಲಿ ಆಡುವ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದೇನೆ ಎಂದರು. ಎಡವಿದ ಬಳಿಕ ನನಗೆ ಬುದ್ಧಿ ಬಂತು. ಕೇವಲ ನೆಟ್ಸ್ನಲ್ಲಿ ಅಭ್ಯಾಸ ಮಾಡುವುದಕ್ಕೂ, ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ' ಎಂದಿದ್ದಾರೆ.