ನವದೆಹಲಿ: ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಭಾರಿಸಿದ ಮತ್ತು ಗರಿಷ್ಠ ಶತಕಗಳ ದಾಖಲೆ ಹೊಂದಿರುವ ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಕುಮಾರ್ ಸಂಗಕ್ಕಾರ, ಜಾಕ್ ಕಾಲೀಸ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ.
ಇದೊಂದು ಬಹಳ ಕಠಿಣವಾದ ನಿರ್ಧಾರ. ಕುಮಾರ್ ಸಂಗಕ್ಕಾರ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರು ಈ ವಿಭಾಗದ ಐಕಾನ್ಗಳು, ಆದರೆ ಮತಗಳ ಆಧಾರದ ಮೇಲೆ 21ನೇ ಶತಮಾನದ ಅದ್ಭುತ ಟೆಸ್ಟ್ ಬ್ಯಾಟ್ಸ್ಮನ್ ಪಟ್ಟ ನನ್ನ ಸಹ ಮುಂಬೈಕರ್ ಸಚಿನ್ ರಮೇಶ್ ತೆಂಡೂಲ್ಕರ್ಗೆ ಸಿಕ್ಕಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ದಂತಕತೆ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 15,921 ರನ್ ಮತ್ತು 51 ಶತಕ ಸಿಡಿಸಿದ್ದಾರೆ. ಇವರು 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ರಿಕಿಪಾಂಟಿಂಗ್ ಅವರಿಗಿಂತ 2543 ಹೆಚ್ಚು ರನ್ ಮುಂದಿದ್ದಾರೆ. ಗರಿಷ್ಠ ಶತಕಗಳ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್(45)ಗಿಂತ 6 ಶತಕ ಮುಂದಿದ್ದಾರೆ. ಸಂಗಕ್ಕಾರ 12,400 ರನ್ ಮತ್ತು 38 ಶತಕ ಭಾರಿಸಿದ್ದಾರೆ.