ದಿ ಓವೆಲ್(ಲಂಡನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇಂಗ್ಲೆಂಡ್ ನೀಡಿದ್ದ 111ರನ್ಗಳ ಗುರಿ ಬೆನ್ನತ್ತಿದ ಭಾರತ 18.4 ಓವರ್ಗಳಲ್ಲಿ ಯಾವುದೇ ವಿಕೆಟ್ನಷ್ಟವಿಲ್ಲದೇ 114ರನ್ಗಳಿಕೆ ಮಾಡಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ದಿ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 25 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 110 ರನ್ಗಳಿಕೆ ಮಾಡಿ, ಭಾರತಕ್ಕೆ 111ರನ್ಗಳ ಸುಲಭ ಟಾರ್ಗೆಟ್ ನೀಡಿತು. ಸುಲಭ ರನ್ಗಳ ಗುರಿ ಬೆನ್ನತ್ತಿದ ಭಾರತ ಯಾವುದೇ ವಿಕೆಟ್ನಷ್ಟವಿಲ್ಲದೇ ಗೆಲುವಿನ ನಗೆ ಬೀರಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅಜೇಯ 76ರನ್ಗಳಿಕೆ ಮಾಡಿದರೆ, ಶಿಖರ್ ಧವನ್ ಅಜೇಯ 31ರನ್ಗಳಿಸಿದರು. ಈ ಮೂಲಕ 18. 4ಓವರ್ಗಳಲ್ಲಿ ಯಾವುದೇ ವಿಕೆಟ್ನಷ್ಟವಿಲ್ಲದೇ 114ರನ್ಗಳಿಕೆ ಮಾಡಿ, ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಮೊದಲ ಓವರ್ನಲ್ಲೇ ಆಘಾತ ನೀಡಿದರು. ತಾವು ಎಸೆದ ಮೊದಲ ಓವರ್ನಲ್ಲಿ ಜಾಸನ್ ರಾಯ್(0) ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಜೋ ರೂಟ್(0) ಕೂಡ ಬುಮ್ರಾಗೆ ಬಲಿಯಾದರು. ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ಸ್ಟೋಕ್ಸ್(0) ಕೂಡ ಬುಮ್ರಾ ಓವರ್ನಲ್ಲಿ ಖಾತೆ ತೆರೆಯುವುದಕ್ಕೂ ಮೊದಲೇ ಪೆವಿಲಿಯನ್ ಸೇರಿಕೊಂಡರು.
ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಬೈರ್ಸ್ಟೋ(7)ರನ್ಗಳಿಕೆ ಮಾಡಿ ಬುಮ್ರಾಗೆ ಬಲಿಯಾದರೆ, ಲಿವಿಗ್ಸ್ಟೋನ್(0) ಔಟಾದರು. ಹೀಗಾಗಿ, ಇಂಗ್ಲೆಂಡ್ ತಂಡ 26 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್ ಬಟ್ಲರ್ ಹಾಗೂ ಮೊಯಿನ್ ಅಲಿ ಸ್ವಲ್ಪ ಹೊತ್ತು ಜೊತೆಯಾಟ ಆಡಿದರು. ಆದರೆ, 14ರನ್ಗಳಿಕೆ ಮಾಡಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆದ ಓವರ್ನಲ್ಲಿ ಮೊಯಿನ್ ವಿಕೆಟ್ ಒಪ್ಪಿಸಿದರು. 30ರನ್ಗಳಿಕೆ ಮಾಡಿದ್ದ ಬಟ್ಲರ್ ಕೂಡ ಶಮಿಗೆ ಔಟಾದರು.