ಹೈದರಾಬಾದ್:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸ್ಥಾನವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಡಳಿತ ಸಮಿತಿಯ ಅಧ್ಯಕ್ಷ ನಜಮ್ ಸೇಥಿ ಹೇಳಿದ್ದಾರೆ. ಗುರುವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) 2023ರ ಏಷ್ಯಾಕಪ್ ಅನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದ ನಂತರ ನಜಮ್ ಸೇಥಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ನಜಮ್ ಸೇಥಿ, ' 15 ವರ್ಷಗಳ ನಂತರ ನಮ್ಮ ಪಾಕಿಸ್ತಾನಕ್ಕೆ ಏಷ್ಯಾಕಪ್ ಟೂರ್ನಿಯ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ನಮ್ಮ ಹೈಬ್ರಿಡ್ ಮಾದರಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಪ್ಪಿಕೊಂಡಿರುವುದು ಕೂಡ ಸಂತೋಷವಾಗಿದೆ. ಕಾರಣ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಹಿನ್ನೆಲೆ ಹೈಬ್ರಿಡ್ ಮಾದರಿ ಅಗತ್ಯವಾಗಿತ್ತು. ಹಾಗೇ ಏಷ್ಯಾದ ದೇಶಗಳಿಗೆ ಅವಕಾಶಗಳು ಮತ್ತು ವೇದಿಕೆ ನೀಡುವುದು ನಮ್ಮ ಗುರಿಯಾಗಿದೆ. ಈ ಮೂಲಕ ನಾವು ಒಟ್ಟಾಗಿ ಇತರ ದೇಶಗಳ ಪರಸ್ಪರರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ' ಎಂದಿದ್ದಾರೆ.
’’ನಮ್ಮ ದೇಶದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ, ಬಿಸಿಸಿಐನ ನಿಲುವು ನಮಗೆ ಅರ್ಥವಾಗಿದೆ. ಪಿಸಿಬಿಯಂತೆ ಬಿಸಿಸಿಐ ಕೂಡ ಗಡಿ ದಾಟಲು ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ ನಂತರ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸ ಬೇಕಾಗಿ ಬಂತು. ಹಾಗಾಗಿ ಹೈಬ್ರಿಡ್ ಮಾದರಿಯು ಉತ್ತಮ ಪರಿಹಾರವಾಗಿದೆ ಹಾಗೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಬಲಪಡಿಸಿದ ಜೈ ಶಾ ಅವರ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ' ಎಂದು ನಜಮ್ ಸೇಥಿ ಹೇಳಿದ್ದಾರೆ.