ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ. ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ನಾಳೆಯಿಂದ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಏಷ್ಯಾಡ್ ಕ್ವಾರ್ಟರ್‌ಫೈನಲ್ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಏಕದಿನ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಒಂದೇ ಸಮಯದಲ್ಲಿ ನಡೆಯುತ್ತಿದೆ.
ಭಾರತದಿಂದ ಯುವ ತಂಡವನ್ನು ಆಯ್ಕೆ ಏಷ್ಯಾಡ್ಗೆ ಕಳುಹಿಸಲಾಗಿದೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ದೊರೆತಿದೆ. ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಆಕಾಶ್‌ದೀಪ್ ಪಾದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಐಪಿಎಲ್ನಲ್ಲಿ ಐದು ಸಿಕ್ಸ್ ಬಾರಿಸಿದ ರಿಂಕು ಸಿಂಗ್ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಮುಖೇಶ್ ಕುಮಾರ್ ಮತ್ತು ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದ್ದರು. ಹೀಗೆ ಹೆಚ್ಚು ಯುವ ಆಟಗಾರರೇ ತಂಡದಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಾಡಿದ್ದು, ಒಂದು ಶತಕ ಮತ್ತು ಎರಡು ಅರ್ಧಶತಕದಿಂದ ಒಟ್ಟಾರೆ 7 ಅಂತರರಾಷ್ಟ್ರೀಯ ಪಂದ್ಯಗಳಿಂದ 398 ರನ್ ಕಲೆಹಾಕಿದ್ದಾರೆ. ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನಾಡಿದ ರಿಂಕು ಸಿಂಗ್ಗೆ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಏಷ್ಯಾಡ್ನಲ್ಲಿ ಅವರ ಬ್ಯಾಟ್ನಿಂದ ರನ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು.
ವಿಶ್ವಕಪ್ಗೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ್ದರು. ತಿಲಕ್ ವರ್ಮಾ ವಿಂಡೀಸ್ ಪ್ರವಾಸ ಮತ್ತು ಏಷ್ಯಾಕಪ್ನಲ್ಲಿ ಭಾರತದ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್ ಬೌಲಿಂಗ್ ವಿಭಾಗವನ್ನು ನಿಭಾಯಿಸಲಿದ್ದಾರೆ.
ಪಂದ್ಯ ನಡೆಯುವ ಸ್ಥಳ, ನೇರಪ್ರಸಾರದ ವಿವರ: ನಾಳೆ ಬೆಳಗ್ಗೆ ಭಾರತೀಯ ಕಾಲಮಾನ 6:30ಕ್ಕೆ ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ಪಂದ್ಯ ಆರಂಭವಾಗಲಿದೆ. ಪಂದ್ಯದ ನೇರಪ್ರಸಾರ ಸೋನಿ ಸ್ಪೋರ್ಟ್ಸ್ ಮತ್ತು ಸೋನಿ ಲೈವ್‌ನಲ್ಲಿ ವೀಕ್ಷಿಸಬಹುದು.