ಅಹ್ಮದಾಬಾದ್: ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಹೊರೆತುಪಡಿಸಿ ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ಬಂದ ಭಾರತ ತಂಡದ ಆಟಗಾರರು ಗುರುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದ್ದಾರೆ.
ಇನ್ನೂ ಪ್ರಮುಖ ಆಟಗಾರರಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಭಾರತ ತಂಡಕ್ಕೆ ಸೇರ್ಪಡೆಯಾಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಮೂರು ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದು, ಮೊದಲ ಏಕದಿನ ಪಂದ್ಯದ ವೇಳೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಫೆಬ್ರವರಿ 6ರಂದು ಆರಂಭವಾಗಲಿದೆ.
ಇಂದು ಮೈದಾನಕ್ಕಿಳಿದಿದ್ದ ಭಾರತೀಯ ಆಟಗಾರರ ತರಬೇತುದಾರರ ಸಮ್ಮುಖದಲ್ಲಿ ಸಾಮಾನ್ಯ ತರಬೇತಿ ಸೆಷನ್ ನಡೆಸಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಇನ್ನು ಮಯಾಂಕ್ ಅಲ್ಲದೆ ಟಿ20 ತಂಡದಲ್ಲಿರು ಇಶಾನ್ ಕಿಶನ್ರನ್ನು ಕೂಡ ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎನ್ನಲಾಗಿದ್ದು, ಆರಂಭಿಕನ ಸ್ಥಾನಕ್ಕಾಗಿ ಮ್ಯಾನೇಜ್ಮೆಂಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಧವನ್, ರುತುರಾಜ್ ಮತ್ತು ಶ್ರೇಯಸ್ ಅಯ್ಯರ್ ಅಲ್ಲದೆ, ಮೀಸಲು ಆಟಗಾರನಾಗಿದ್ದ ನವದೀಪ್ ಸೈನಿ ಹಾಗೂ ಫಿಲ್ಡಿಂಗ್ ಕೋಚ್ ಟಿ ದಿಲೀಪ್, ಭದ್ರತಾ ಅಧಿಕಾರಿಗಳಾದ ಬಿ. ಲೋಕೇಶ್ ಮತ್ತು ರಾಜೀವ್ ಕುಮಾರ್ ಅವರಿಗೆ ಸೋಂಕು ದೃಢಪಟ್ಟಿತ್ತು.
ಇದನ್ನೂ ಓದಿ:ನನಗೆ ಕೆರಿಯರ್ ಮುಖ್ಯ: ಐಪಿಎಲ್ನಿಂದ ದೂರ ಉಳಿಯುತ್ತೇನೆಂದ ಜೇಮಿಸನ್!