ನವದೆಹಲಿ: ಪ್ರಥಮ ದರ್ಜೆಯ ನಿರಾಶಾದಾಯಕ ಋತುವಿನ ನಂತರ ದುಲೀಪ್ ಟ್ರೋಫಿ ತಂಡದಿಂದ ನಿರ್ಲಕ್ಷಿಸಲ್ಪಟ್ಟ ಪ್ರತಿಭಾವಂತ ಯಶ್ ಧುಲ್ ಅವರನ್ನು ಜುಲೈ 13 ರಿಂದ 23 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಏಷ್ಯಾಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಮಂಗಳವಾರ ಭಾರತ ಎ ನಾಯಕರನ್ನಾಗಿ ನೇಮಿಸಲಾಗಿದೆ.
ಉದಯೋನ್ಮುಖ ಪಂದ್ಯಾವಳಿಯ ಅವಶ್ಯಕತೆಯ ಪ್ರಕಾರ, ತಂಡವು ಮುಖ್ಯವಾಗಿ 23 ವರ್ಷದೊಳಗಿನ ಆಟಗಾರರನ್ನು ಒಳಗೊಂಡಿದೆ. ಪಂಜಾಬ್‌ನ ರಣಜಿ ತಂಡದ ನಾಯಕ ಅಭಿಷೇಕ್ ಶರ್ಮಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ತಂಡದಲ್ಲಿ ಆಯ್ಕೆಯಾದ ಎಲ್ಲ ಆಟಗಾರರು ಮೂರು ಮಾದರಿಗಳಲ್ಲಿ ಒಂದರಲ್ಲಿ ತಮ್ಮ ರಾಜ್ಯದ ಹಿರಿಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಭಾ ಸಿಮ್ರಾನ್ ಸಿಂಗ್ ಹೆಸರಿನಲ್ಲಿ ಶತಕವೂ ದಾಖಲಾಗಿದೆ.
ವಿಕೆಟ್ ಕೀಪಿಂಗ್ ಜವಾಬ್ದಾರಿ ಪ್ರಭಾಸಿಮ್ರಾನ್ ಮತ್ತು ಧ್ರುವ್ ಜುರೆಲ್ ಅವರ ಹೆಗಲ ಮೇಲಿರುತ್ತದೆ. ಜುರೆಲ್ ರಾಜಸ್ಥಾನ್ ರಾಯಲ್ಸ್‌ಗೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಆಡುವಾಗ ಕೆಲವು ಸಂದರ್ಭಗಳಲ್ಲಿ ಫಿನಿಶರ್ ಪಾತ್ರದಲ್ಲಿ ಯಶಸ್ವಿಯಾಗಿ ಮಿಂಚಿದರು. ದೆಹಲಿಯ ವೇಗದ ಬೌಲಿಂಗ್ ಆಲ್ ರೌಂಡರ್ ಹರ್ಷಿತ್ ರಾಣಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ರಾಣಾ ತನ್ನ ವೇಗದಿಂದ ಪ್ರಭಾವಿತನಾಗಿದ್ದ. ಅವರು ಇತ್ತೀಚೆಗೆ ತಮ್ಮ ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಚೊಚ್ಚಲ ಪ್ರಥಮ ದರ್ಜೆ ಶತಕವನ್ನೂ ಕೂಡಾ ಬಾರಿಸಿದ್ದರು.
ವಿಶ್ವಕಪ್ ವಿಜೇತ ತಂಡದ ನಾಯಕ:19 ವರ್ಷದವರೊಳಗಿನ ವಿಶ್ವಕಪ್ 2022 ವಿಜೇತ ಭಾರತೀಯ ತಂಡದ ನಾಯಕ ಧುಲ್, ದೇಶೀಯ ಋತುವಿನಲ್ಲಿ ಆರು ರಣಜಿ ಪಂದ್ಯಗಳಲ್ಲಿ ಕೇವಲ 270 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕೂ ಮುನ್ನ ಅವರು ವಿಜಯ್ ಹಜಾರೆ ಟ್ರೋಫಿಯ ಏಳು ಪಂದ್ಯಗಳಲ್ಲಿ 191 ರನ್ ಬಾರಿಸಿದ್ದರು. ಅವರ ಈ ಹಿಂದಿನ ರೆಕಾರ್ಡ್ ಗಮನಿಸಿದರೆ ಅಷ್ಟೊಂದು ಆಶಾದಾಯವಾಗೇನೂ ಇಲ್ಲ. ಆದರೆ. ಧುಲೆ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಆಗಿ ಆಡಿದ್ದನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಆಯ್ಕೆ ಸಮಿತಿಯು ಅವರಿಗೆ ಅವಕಾಶ ನೀಡಿದೆ ಎಂದು ನಂಬಲಾಗಿದೆ.
ಅಸ್ಸೋಂನ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್‌ನಿಂದ ಸಿಕ್ಕ ಹಲವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು, ಆದರೆ, ಆಯ್ಕೆಗಾರರು ಅವರ ಪ್ರತಿಭೆಯನ್ನು ಪರಿಗಣಿಸಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಪನಾಯಕ ಅಭಿಷೇಕ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಯ್ಕೆದಾರರು ಕೇರಳದ ನಿಕಿನ್ ಜೋಸ್, ಹರಿಯಾಣದ ನಿಶಾಂತ್ ಸಿಂಧು, ತಮಿಳುನಾಡಿನ ಪ್ರದೋಶ್ ರಂಜನ್ ಪಾಲ್ ಮತ್ತು ಬಿ ಸಾಯಿ ಸುದರ್ಶನ್ ಅವರನ್ನೂ ಸೇರಿಸಿಕೊಂಡಿದ್ದಾರೆ.