ಬೆಂಗಳೂರು: ನಡೆಯುತ್ತಿರುವ 2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದು, ಲೀಗ್ ಹಂತದ 8 ಪಂದ್ಯಗಳನ್ನು ಸುಲಭವಾಗಿ ಜಯಿಸಿದೆ. ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನೆದರ್ಲೆಂಡ್ಸ್ಗೆ 410 ರನ್ಗಳ ಬೃಹತ್ ಗುರಿ ನೀಡಿದ್ದರಿಂದ ಇದನ್ನು ಗೆದ್ದು ಅಜೇಯವಾಗಿ ವಿಶ್ವಕಪ್ನಲ್ಲಿ ಮುಂದುವರೆಯುವ ವಿಶ್ವಾಸ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದೆ. ಭಾರತ ತಂಡದ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಅವರ ಶತಕದ ನೆರವಿನಿಂದ 410 ರನ್ ಕಲೆಹಾಕಿದೆ. ಈ ಬೃಹತ್ ಮೊತ್ತದಿಂದ ಹಲವು ದಾಖಲೆಗಳು ನಿರ್ಮಾಣವಾಗಿವೆ.
ವೇಗದ ಶತಕ ಗಳಿಸಿದ ರಾಹುಲ್:ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ವೇಗದ ಶತಕ ಕೆ ಎಲ್ ರಾಹುಲ್ ಬ್ಯಾಟ್ನಿಂದ ದಾಖಲಾಗಿದೆ. ಕೇವಲ 62 ಬಾಲ್ ಎದುರಿಸಿದ ಅವರು 11 ಸಿಕ್ಸ್ ಮತ್ತು 4 ಬೌಂಡರಿಯ ಸಹಾಯದಿಂದ 100 ರನ್ ತಲುಪಿದರು. ಅಫ್ಘನ್ ವಿರುದ್ಧ ರೋಹಿತ್ ಶರ್ಮಾ 63 ಬಾಲ್ನಲ್ಲಿ ಶತಕ ಸಿಡಿಸಿದ್ದ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ. ನಂತರದ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್ (81) ಮತ್ತು ವಿರಾಟ್ ಕೊಹ್ಲಿ (83) ಗಳಿಸಿದ ದಾಖಲೆಗಳಿವೆ.
ವಿಶ್ವಕಪ್ನ ಐದನೇ ಬೃಹತ್ ಮೊತ್ತ: ಟೀಮ್ ಇಂಡಿಯಾ ಗಳಿಸಿದ 410 ರನ್ ವಿಶ್ವಕಪ್ನಲ್ಲಿ ಐದನೇ ಬೃಹತ್ ಮೊತ್ತವಾಗಿದೆ. ಇದೇ ವರ್ಷದ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ 428 ಗಳಿಸಿದ್ದು ಮೊದಲನೇ ಸ್ಥಾನದಲ್ಲಿದೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (417 -2015 ವಿಶ್ವಕಪ್), ಭಾರತ (413 - 2007 ವಿಶ್ವಕಪ್) ಮತ್ತು ದಕ್ಷಿಣ ಆಫ್ರಿಕಾ (411 - 2015 ವಿಶ್ವಕಪ್) 2 ರಿಂದ 4ನೇ ಸ್ಥಾನದಲ್ಲಿವೆ.