ರಾಯ್‌ಪುರ(ಛತ್ತೀಸ್ಗಢ):ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 1 ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ, ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಎದುರಿಸಬೇಕಾಯಿತು. ಸರಣಿ ಗೆಲ್ಲುವ ಉದ್ದೇಶದಿಂದ ಟೀಂ ಇಂಡಿಯಾ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಆಸ್ಟ್ರೇಲಿಯಾ ಸರಣಿಯನ್ನು ಸಮಬಲಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.
ರಾಯ್‌ಪುರ ತಲುಪಿದ ಟೀಂ ಇಂಡಿಯಾ:ನಾಲ್ಕನೇ ಟಿ20 ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡ ರಾಯ್‌ಪುರ ತಲುಪಿದೆ. ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಹೋಟೆಲ್‌ನಲ್ಲಿ ಆಟಗಾರರಿಗೆ ನೀಡಿದ ಅದ್ಧೂರಿ ಸ್ವಾಗತದ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ನಾಲ್ಕನೇ ಟಿ20 ಪಂದ್ಯದ ಮೊದಲು, ವಿಶ್ವಕಪ್ 2023ರ ಭಾಗವಾಗಿದ್ದ ಬಲಗೈ ಬ್ಯಾಟ್ಸ್‌ಮನ್ ಶ್ರೇಯರ್ ಅಯ್ಯರ್ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವೇಗದ ಬೌಲರ್ ಮುಖೇಶ್ ಕುಮಾರ್ ಕೂಡ ಈ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ.
ಈ ಮೈದಾನದಲ್ಲಿ ಇದು 2ನೇ ಅಂತರಾಷ್ಟ್ರೀಯ ಪಂದ್ಯ: ರಾಯ್‌ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 1 ಅಂತರರಾಷ್ಟ್ರೀಯ ಪಂದ್ಯ ಮಾತ್ರ ನಡೆದಿತ್ತು. ಈ ವರ್ಷದ ಆರಂಭದಲ್ಲಿ ನಡೆದ ಏಕೈಕ ಏಕದಿನ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 108 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ 20.1 ಓವರ್‌ಗಳಲ್ಲಿ ಈ ಸಾಧಾರಣ ಗುರಿಯನ್ನು ಸಾಧಿಸಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ 18 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.
ಭಾರತ- ಸಂಭಾವ್ಯ ತಂಡ:ನಾಯಕ ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಉಪನಾಯಕ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ದುಬೆ, ಶಿವಮ್ ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್..
ಆಸ್ಟ್ರೇಲಿಯಾ ತಂಡ:ನಾಯಕ ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್, ಆರನ್ ಹಾರ್ಡಿ, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್‌ಸನ್..
ಇದನ್ನೂ ಓದಿ:ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಪೋಸ್ಟ್ ವೈರಲ್: ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ಹೇಳಿದ್ದಿಷ್ಟು