ಜೋಹಾನ್ಸ್ಬರ್ಗ್: ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ನೇತೃತ್ವದ ಭಾರತೀಯ ಟೆಸ್ಟ್ ತಂಡ ಜೋಹಾನ್ಸ್ ಬರ್ಗ್ ತಲುಪಿದೆ. ಹರಿಣಗಳ ವಿರುದ್ಧ ಮೊದಲ ಟೆಸ್ಟ್ ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡ ಮುಂಬೈನಿಂದ ಗುರುವಾರ ಬೆಳಗ್ಗೆ ಖಾಸಗಿ ವಿಮಾನದಲ್ಲಿ ತೆರಳಿತ್ತು.
18 ಸದಸ್ಯರ ಟೀಮ್ ಇಂಡಿಯಾ ಮತ್ತು ಕೋಚ್ ಹಾಗೂ ಬೆಂಬಲ ಸಿಬ್ಬಂದಿ ಸೆಂಚುರಿಯನ್ನಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಿಸುವ ಮುನ್ನ ಹೋಟೆಲ್ನಲ್ಲಿ ಕೆಲವು ದಿನಗಳು ಕ್ವಾರಂಟೈನ್ ಆಗಬೇಕಾಗಿದೆ. ಭಾರತೀಯ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ತಲುಪಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಇತಿಹಾಸ ನಿರ್ಮಿಸಲು ಹಾತೊರೆಯುತ್ತಿದೆ. ಎರಡು ತಂಡಗಳ ಮೊದಲು ಬಾಕ್ಸಿಂಗ್ ಡೇ ಪಂದ್ಯವನ್ನಾಡಲಿದೆ. ನಂತರ ಹೊಸ ವರ್ಷದಲ್ಲಿ ಜೋಹಾನ್ಸ್ ಬರ್ಗ್ ಮತ್ತು ಕೇಪ್ಟೌನ್ನಲ್ಲಿ ಉಳಿದೆರಡು ಟೆಸ್ಟ್ ಪಂದ್ಯಗಳನ್ನಾಡಲಿದೆ.