ನವದೆಹಲಿ:ನಾಳೆ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಮಧ್ಯಪ್ರದೇಶದ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ನಡೆಯಲಿದೆ. ಹೋಲ್ಕರ್ ಮೈದಾನ ಭಾರತದ ಪಾಲಿಗೆ ಅದೃಷ್ಟವೇ ಸರಿ. ಇಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಭಾರತದ ಆಟಗಾರರು ಈ ಮೈದಾನದಲ್ಲಿ ಅತ್ಯುತ್ತಮ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಹೀಗಾಗಿ ಕಿವೀಸ್ ಪಾಲಿಗೆ ಭಾರತ ಸವಾಲಾಗುವ ಎಲ್ಲ ಲಕ್ಷಣಗಳಿವೆ.
ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿ ಜಯಿಸಿರುವ ಭಾರತ ಈ ಪಂದ್ಯವನ್ನು ಜಯಿಸಿ, ಸರಣಿ ವೈಟ್ವಾಷ್ ಮಾಡುವ ಉತ್ಸಾಹದಲ್ಲಿದೆ. ಇನ್ನು ಕೊನೆಯ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳಲು ಟಾಮ್ ಲಾಥಮ್ ಪಡೆ ಅಭ್ಯಾಸ ನಡೆಸಿದೆ. ಮೈದಾನದ ಅದೃಷ್ಟ ಮತ್ತು ತಂಡದ ಸಾಮರ್ಥ್ಯದ ಆಧಾರದ ಮೇಲೆ ಪಂದ್ಯ ಭಾರತದ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಇಂದೋರ್‌ನಲ್ಲಿ ಭಾರತದ ದಾಖಲೆಗಳಿವು:ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ 5 ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 6 ನೇ ಏಕದಿನ ಸಂಗ್ರಾಮಕ್ಕೆ ಸಜ್ಜಾಗಿದೆ. ಇನ್ನು ಈ ಮೈದಾನದಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡುತ್ತಿರುವ ನ್ಯೂಜಿಲ್ಯಾಂಡ್ಗೆ ದೊಡ್ಡ ಸವಾಲು ಎದುರಾಗಲಿದೆ.
ಅತ್ಯಧಿಕ ಸ್ಕೋರ್:ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್ಗೆ 418 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಬಳಿಕ ಪಂದ್ಯದಲ್ಲಿ ಹೆಚ್ಚಿನ ಮೊತ್ತದಲ್ಲಿ ಗೆದ್ದಿತ್ತು. ಇನ್ನು ಸಿಂಹದಮರಿ ಎಂದೇ ಖ್ಯಾತಿಯಾಗಿದ್ದ ವೀರೇಂದ್ರ ಸೆಹ್ವಾಗ್ ಈ ಮೈದಾನದಲ್ಲಿ 220 ದ್ವಿಶತಕ ಸಾಧನೆ ಮಾಡಿದ್ದರು. ಇಂದಿಗೂ ಅದು ದಾಖಲೆಯಾಗಿಯೇ ಉಳಿದಿದೆ. ಯಾವೊಬ್ಬ ಬ್ಯಾಟರ್ ಕೂಡ ವೈಯಕ್ತಿಕವಾಗಿ ಈ ರನ್ ಶಿಖರವನ್ನು ದಾಟಿಲ್ಲ.