ಕರ್ನಾಟಕ

karnataka

ETV Bharat / sports

ಐಸಿಸಿ ಟಿ-20 ವಿಶ್ವಕಪ್​ ಬಳಿಕ ರವಿಶಾಸ್ತ್ರಿ ರಾಜೀನಾಮೆ ಖಚಿತ: ಹೊಸ ಕೋಚ್ ಇವರೇನಾ? - ವಿಶ್ವಕಪ್​ ಬಳಿಕ ಶಾಸ್ತ್ರಿ ನಿವೃತ್ತಿ

ಟೀಂ ಇಂಡಿಯಾ ಕೋಚ್​ ಆಗಿ ಸೇವೆ ಸಲ್ಲಿಸುತ್ತಿರುವ ರವಿಶಾಸ್ತ್ರಿ ಅಧಿಕಾರವಧಿ ಐಸಿಸಿ ಟಿ-20 ವಿಶ್ವಕಪ್​​ ಜೊತೆಗೆ ಮುಕ್ತಾಯಗೊಳ್ಳಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

Ravi Shastri
Ravi Shastri

By

Published : Sep 15, 2021, 3:53 PM IST

ಹೈದರಾಬಾದ್​​: ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಮುಕ್ತಾಯದ ಬಳಿಕ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂಬ ಖಚಿತ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ರವಿಶಾಸ್ತ್ರಿ ಖುದ್ದಾಗಿ ಭಾರತೀಯ ಕ್ರಿಕೆಟ್ ಮಂಡಳಿಗೆ ಈ ಕುರಿತು ತಿಳಿಸಿದ್ದಾರೆ ಎನ್ನಲಾಗಿದೆ.

2017ರಿಂದ 2019ರವರೆಗೆ ಟೀಂ ಇಂಡಿಯಾ ಕೋಚ್​ ಆಗಿ ಸೇವೆ ಸಲ್ಲಿಸಿದ್ದ ರವಿಶಾಸ್ತ್ರಿ ಅವರನ್ನು ಐಸಿಸಿ ಟಿ-20 ವಿಶ್ವಕಪ್​ ಮುಕ್ತಾಯದವರೆಗೆ ಕೋಚ್​ ಆಗಿ ಮುಂದುವರೆಸಲಾಗಿತ್ತು. ಇದೀಗ ಈ ಅವಧಿ ಮುಕ್ತಾಯವಾಗುತ್ತಿದ್ದಂತೆ ಕೋಚ್​ ಹುದ್ದೆ ತೊರೆಯಲಿದ್ದಾರೆ ಎನ್ನಲಾಗಿದೆ. ಅಕ್ಟೋಬರ್​​ 17ರಿಂದ ನವೆಂಬರ್​ 14ರವರೆಗೆ ವಿಶ್ವಕಪ್​ ಟಿ-20 ಟೂರ್ನಮೆಂಟ್ ನಡೆಯಲಿದ್ದು, ಇದಾದ ಬಳಿಕ ಟೀಂ ಇಂಡಿಯಾಗೆ ನೂತನ ಕೋಚ್​ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಖಚಿತ.

ರವಿಶಾಸ್ತ್ರಿ ಜೊತೆಗೆ ಬೌಲಿಂಗ್​ ಕೋಚ್​​ ಭರತ್ ಅರುಣ್​​ ಹಾಗೂ ಫೀಲ್ಡಿಂಗ್​ ಕೋಚ್​ ಆಗಿರುವ ಶ್ರೀಧರ್​ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋಡ್ ಮಾತ್ರ ತಂಡದೊಂದಿಗೆ ಇರಲಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಕೋಚ್​ ಹುಡುಕಾಟದಲ್ಲಿ ಬಿಸಿಸಿಐ:

ರವಿಶಾಸ್ತ್ರಿ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಮಂಡಳಿ, ನೂತನ ಕೋಚ್​ ಹುಡುಕಾಟದಲ್ಲಿ ಮಗ್ನವಾಗಿದ್ದು, ಅದಕ್ಕಾಗಿ ಹೊಸ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ದಟ್ಟವಾಗಿದೆ.

ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​

ರೇಸ್​ನಲ್ಲಿ ರಾಹುಲ್​ ದ್ರಾವಿಡ್​, ವಿರೇಂದ್ರ ಸೆಹ್ವಾಗ್:

ಟೀಂ ಇಂಡಿಯಾ ನೂತನ ಕೋಚ್​ ರೇಸ್​ನಲ್ಲಿ ಟೀಂ ಇಂಡಿಯಾ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್​ ವಿರೇಂದ್ರ ಸೆಹ್ವಾಗ್​ ಹೆಸರು ಕೇಳಿ ಬಂದಿದೆ. ಈಗಾಗಲೇ ಟೀಂ ಇಂಡಿಯಾ(ಶ್ರೀಲಂಕಾ ಪ್ರವಾಸ) ಕೋಚ್​ ಆಗಿ ಅನುಭವ ಹೊಂದಿರುವ ರಾಹುಲ್​ ದ್ರಾವಿಡ್​ಗೆ ಮಣೆ ಹಾಕುವ ಸಾಧ್ಯತೆ ಇದೆ. ಈಗಾಗಲೇ ಅಂಡರ್​-19 ಹಾಗೂ ಎನ್​ಸಿಎ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.

ಸ್ಪೋಟಕ ಬ್ಯಾಟ್ಸ್‌ಮನ್​ ವಿರೇಂದ್ರ ಸೆಹ್ವಾಗ್​

ಇದನ್ನೂ ಓದಿ: ರವಿ ಭಾಯ್​ ತಂಡದ ಕೋಚ್​​ ಆಗಿ ಮುಂದುವರಿದರೆ ನಮಗೆ ಸಂತೋಷ: ಕ್ಯಾಪ್ಟನ್​ ಕೊಹ್ಲಿ

ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾ ಡಿಸೆಂಬರ್​ 16ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ವೇಳೆಗೆ ಹೊಸ ಕೋಚ್​ ತಂಡದ ಜವಾಬ್ದಾರಿ ಹೊತ್ತುಕೊಳ್ಳುವ ಸಾಧ್ಯತೆ ಇದೆ. ವಿಶೇಷವೆಂದರೆ, ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್​ ಆದ ಮೇಲೆ ಭಾರತ ತಂಡ ಯಾವುದೇ ರೀತಿಯ ಐಸಿಸಿ ಟ್ರೋಫಿ ಗೆದ್ದಿಲ್ಲ.

ABOUT THE AUTHOR

...view details