ಮುಂಬೈ:ಮಹಿಳಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರು 347 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದ್ದಾರೆ. ಇಲ್ಲಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ರನ್‌ಗಳ ಗೆಲುವು ಎಂಬ ದಾಖಲೆಯನ್ನು ಭಾರತದ ವನಿತೆಯರು ಬರೆದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 47 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾದರು.
ಮಧ್ಯಮ ಕ್ರಮಾಂಕದಲ್ಲಿ ಶುಭಾ ಸತೀಶ್ (69) ಮತ್ತು ಜೆಮಿಮಾ ರಾಡ್ರಿಗಸ್ (68) ಅರ್ಧಶತಕ ಬಾರಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಲು ಸಹಾಯ ಮಾಡಿದರು. ನಂತರ ಯಾಸ್ತಿಕಾ ಭಾಟಿಯಾ (66) ಮತ್ತು ದೀಪ್ತಿ ಶರ್ಮಾ (67) ಅರ್ಧ ಶತಕಗಳೊಂದಿಗೆ ಮಿಂಚಿದರು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 104.3 ಓವರ್ಗೆ 428 ರನ್ ಕಲೆಹಾಕಿ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್: ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಭಾರತದ ಬೌಲರ್ಗಳ ದಾಳಿಗೆ ಮುಗ್ಗರಿಸಿತ್ತು. ಕೇವಲ 136 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದು ಕೊಂಡು ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ದೀಪ್ತಿ ಶರ್ಮಾ 5 ವಿಕೆಟ್ ಪಡೆದರೆ, ಸ್ನೇಹಾ ರಾಣಾ 2, ರೇಣುಕಾ ಸಿಂಗ್, ಪೂಜಾ ವಸ್ತ್ರಕರ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.