ನವದೆಹಲಿ: 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಪ್ರಸ್ತುತ ಆವೃತ್ತಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಈ ಮೂಲಕ 7 ವಿಶ್ವಕಪ್ಗಳಲ್ಲಿ 4ನೇ ಬಾರಿ ಗುಂಪು ಹಂತದಲ್ಲಿ ಹೊರಬಿದ್ದಿದೆ.
2007ರಲ್ಲಿ ಸೂಪರ್ ಗುಂಪು ಹಂತದಲ್ಲಿ ಗುಂಪು ಹಂತ ಮತ್ತು ಸೂಪರ್ 8ನಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ತಂಡ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮತ್ತು ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿದಿತ್ತು.
ಆದರೆ 2009ರ ಇಂಗ್ಲೆಂಡ್ ಮತ್ತು 2010ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ಕಂಡು ಹೊರಬಿದ್ದಿತ್ತು. ಲೀಗ್ನಲ್ಲಿ ಅಗ್ರಸ್ಥಾನ ಪಡೆದರೂ ಸೂಪರ್ 8ನಲ್ಲಿ ಒಂದೂ ಪಂದ್ಯವನ್ನು ಗೆಲ್ಲದೇ ಟೂರ್ನಿಯಿಂದ ಔಟ್ ಆಗಿತ್ತು.
2012ರಲ್ಲಿ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದರೂ ಸೂಪರ್ 8ರಲ್ಲಿ ರನ್ರೇಟ್ನಲ್ಲಿ ಹಿನ್ನಡೆ ಅನುಭವಿಸಿ ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳಂತೆಯೇ 4 ಅಂಕಗಳನ್ನು ಪಡೆದರೂ ರನ್ರೇಟ್ನಲ್ಲಿ ಹಿಂದಿದ್ದರಿಂದ ಸತತ 3ನೇ ವಿಶ್ವಕಪ್ನಲ್ಲಿ ಸೂಪರ್ 8 ಹಂತದಲ್ಲೇ ನಿರ್ಗಮಿಸಿತ್ತು.