ತಿರುವನಂತಪುರಂ:ವಿಜಯ ಹಜಾರೆ ಟ್ರೋಫಿ 2021-22ರ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡ ಬರೋಡ ವಿರುದ್ಧ ಕೇವಲ 115 ರನ್ಗಳನ್ನು ಚೇಸ್ ಮಾಡಲಾಗದೇ 73 ರನ್ಗಳಿಗೆ ಆಲೌಟ್ ಆಗಿದ್ದು, 41 ರನ್ಗಳ ಹೀನಾಯ ಸೋಲು ಕಂಡಿದೆ.
ಇತ್ತೀಚೆಗಷ್ಟೇ ಕರ್ನಾಟಕ ತಂಡವನ್ನು ಮಣಿಸಿ ಸೈಯದ್ ಮುಷ್ತಾಕ್ ಅಲಿ ಟಿ-20 ಪ್ರಶಸ್ತಿ ಗೆದ್ದಿದ್ದ ತಮಿಳುನಾಡು ತಂಡ, ವಿಜಯ ಹಜಾರೆ ಟ್ರೋಫಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಈಗಾಗಲೇ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ. ಆದರೆ, ಕಳೆದ ಪಂದ್ಯದಲ್ಲಿ ಪುದುಚೇರಿ ವಿರುದ್ಧ 1 ರನ್ ಸೋಲು ಕಂಡಿದ್ದ ತಮಿಳುನಾಡು ಇಂದು ಬರೋಡ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಆದರೂ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.
ಕೆಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬರೋಡ 39 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗಿತ್ತು. ಕೃನಾಲ್ ಪಾಂಡ್ಯ 38 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಬ್ಯಾಟರ್ಗಳು 20ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ತಮಿಳುನಾಡು ಪರ ಎಂ ಸಿದ್ಧಾರ್ಥ್, ಸಂದೀಪ್ ವಾರಿಯರ್, ವಾಷಿಂಗ್ಟನ್ ಸುಂದರ್, ಸಂಜಯ್ ಯಾದವ್ ತಲಾ 2 ವಿಕೆಟ್ ಪಡೆದರೆ, ಸಾಯಿ ಕಿಶೋರ್ ಮತ್ತು ಹರಿ ನಿಶಾಂತ್ ತಲಾ ಒಂದು ವಿಕೆಟ್ ಪಡೆದಿದ್ದರು.