ಅಬುಧಾಬಿ: ಕಳೆದ ಎರಡೂ ಐಸಿಸಿ ಟ್ರೋಫಿಗಳಲ್ಲಿ ತಲಾ ಒಂದನ್ನು ಜಯಿಸಿರುವ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಬುಧವಾರ ನಡೆಯಲಿರುವ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಮುಖಾ ಮುಖಿಯಾಗಲಿವೆ.
2019ರ ಏಕದಿನ ವಿಶ್ವಕಪ್ನಲ್ಲಿ ಎರಡೂ ತಂಡಗಳು ಫೈನಲ್ ತಲುಪಿದ್ದವು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ನಡೆಸಲಾಗಿತ್ತು. ಆದರೆ ಸೂಪರ್ ಓವರ್ ಟೈ ಆಗಿದ್ದರಿಂದ ಹೆಚ್ಚು ಬೌಂಡರಿ ಸಿಡಿಸಿದ ಆಧಾರದ ಮೇಲೆ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿತ್ತು. ನಂತರ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಫೈನಲ್ನಲ್ಲಿ ಭಾರತವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.
2021ರ ಟಿ20 ವಿಶ್ವಕಪ್ನಲ್ಲಿ ಎರಡೂ ತಂಡಗಳು ತಲಾ 4 ಪಂದ್ಯಗಳಲ್ಲಿ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿವೆ. ಬುಧವಾರ ಅಬುಧಾಬಿಯಲ್ಲಿ ಮೊದಲ ಸೆಮಿಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ 2019ರ ರೋಚಕ ಕ್ಷಣ ಮರು ಸೃಷ್ಟಿಯಾಗುವುದನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್ಗೂ ಮುನ್ನ ದೊಡ್ಡ ಆಘಾತವಾಗಿದೆ. ಆರಂಭಿಕ ಬ್ಯಾಟರ್ ಜೇಸನ್ ರಾಯ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಟೂರ್ನಿ ಮಧ್ಯೆಯೇ ತೈಮಲ್ ಮಿಲ್ಸ್ ಗಾಯಕ್ಕೊಳಗಾಗಿದ್ದರು. ಈ ಕಾರಣದಿಂದಲೇ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದರು. ಫೈನಲ್ ಪಂದ್ಯದಲ್ಲಿ ಡೇವಿಡ್ ವಿಲ್ಲೆ ಅಥವಾ ಟಾಮ್ ಕರ್ರನ್ ಆಡುವ ಸಾಧ್ಯತೆಯಿದೆ.
ಇತ್ತ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಬಿಟ್ಟರೆ ಎಲ್ಲಾ ಪಂದ್ಯಗಳಲ್ಲೂ ಪ್ರಾಬಲ್ಯ ಪ್ರದರ್ಶಿಸಿರುವ ನ್ಯೂಜಿಲ್ಯಾಂಡ್ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆಯಿದೆ.