ದುಬೈ:ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಹೀನಾಯ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿದೆ.
ತಾವಾಡಿದ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಸೋಲು ಕಂಡಿದ್ದರಿಂದ ಈ ಪಂದ್ಯವನ್ನು ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ನಿರೀಕ್ಷೆಯಂತೆ ಬೌಲಿಂಗ್ ಮಾಡಲು ನಿರ್ಧರಿಸಿತು.
ನಾಯಕ ಕೇನ್ ವಿಲಿಯಮ್ಸನ್ ಆಯ್ಕೆಯನ್ನ ಸಮರ್ಥಿಸಿಕೊಂಡ ಟ್ರೆಂಟ್ ಬೌಲ್ಟ್ ಇನ್ನಿಂಗ್ಸ್ನ 3ನೇ ಓವರ್ನಲ್ಲಿ 4 ರನ್ ಗಳಿಸಿದ್ದ ಇಶಾನ್ ಕಿಶನ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಪೆಟ್ಟು ನೀಡಿದರು. ನಂತರ 16 ಎಸೆತಗಳಲ್ಲಿ 3 ಬೌಂಡರಿ ಸಹಿತ 18 ರನ್ಗಳಿಸಿದ್ದ ರಾಹುಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ಸೌಥಿಗೆ ವಿಕೆಟ್ ಒಪ್ಪಿಸಿದರು.
ರಾಹುಲ್ ವಿಕೆಟ್ ಬೀಳುತ್ತಿದ್ದಂತೆ ಭಾರತ ತಂಡ ಚೇತರಿಕೆಯನ್ನೇ ಕಾಣಲಾಗಲಿಲ್ಲ. ರೋಹಿತ್ (14), ವಿರಾಟ್ ಕೊಹ್ಲಿ (4), ರಿಷಭ್ ಪಂತ್(12), ಹಾರ್ದಿಕ್ ಪಾಂಡ್ಯ (23), ಶಾರ್ದೂಲ್ ಠಾಕೂರ್ (0) ರನ್ ಗಳಿಸಲು ಪರದಾಡಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 26 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಭಾರತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 110 ರನ್ಗಳಿಸಲಷ್ಟೇ ಶಕ್ತವಾಯಿತು.
ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಸೋಧಿ 4 ಓವರ್ಗಳಲ್ಲಿ 17 ರನ್ಗೆ 2 ಹಾಗೂ ಸೌಥಿ ಮತ್ತು ಆ್ಯಡಂ ಮಿಲ್ನೆ ತಲಾ ಒಂದು ವಿಕೆಟ್ ಪಡೆದರು.