ಹೋಬರ್ಟ್: ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ರೋಚಕತೆ ಆರಂಭವಾಗಿದೆ. ಟೂರ್ನಿಯ 11ನೇ ಪಂದ್ಯ ಇಂದು ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿದೆ. ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತವನ್ನು ಕಲೆ ಹಾಕಿದೆ.
ಗ್ರೂಪ್-ಬಿನ ಈ ಪಂದ್ಯವು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಎರಡು ಪಂದ್ಯಗಳಲ್ಲಿ ತಲಾ ಎರಡು ಅಂಕಗಳನ್ನು ಹೊಂದಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್-12ರಲ್ಲಿ ಸ್ಥಾನ ಪಡೆಯಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ತಂಡವನ್ನು ಐರ್ಲೆಂಡ್ ತಂಡ 146 ರನ್ಗಳಿಗೆ ಕಟ್ಟಿ ಹಾಕಿದೆ. ಆರಂಭದಿಂದಲೇ ಕುಸಿತ ಕಂಡ ವೆಸ್ಟ್ ತಂಡ ನಿಧನವಾಗಿ ಚೇತರಿಸಿಕೊಂಡಿತು. ಬ್ರಾಂಡನ್ ಕಿಂಗ್ ಅಮೋಘ ಅರ್ಧ ಶತಕದ ನೆರವಿನಿಂದ ತಂಡ ಸ್ಕೋರ್ ಏರಿಕೆ ಕಂಡಿತು. ಒಟ್ಟಿನಲ್ಲಿ ನಿಗದಿತ 20 ಓವರ್ಗಳಿಗೆ ವೆಸ್ಟ್ ಇಂಡೀಸ್ ತಂಡ ಐದು ವಿಕೆಟ್ಗಳ ನಷ್ಟಕ್ಕೆ 146 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ಐರ್ಲೆಂಡ್ ತಂಡಕ್ಕೆ 147 ರನ್ಗಳ ಗುರಿ ನೀಡಿದೆ.
ವೆಸ್ಟ್ ಇಂಡೀಸ್ ತಂಡದ ಪರವಾಗಿ ಕೈಲ್ ಮೇಯರ್ಸ್ 1 ರನ್, ಜಾನ್ಸನ್ ಚಾರ್ಲ್ಸ್ 24 ರನ್, ಎವಿನ್ ಲೆವಿಸ್ 13 ರನ್, ನಿಕೋಲಸ್ ಪೂರನ್ 13 ರನ್, ರೋವ್ಮನ್ ಪೊವೆಲ್ 6 ರನ್ ಮತ್ತು ಬ್ರಾಂಡನ್ ಕಿಂಗ್ 62 ರನ್ ಹಾಗೂ ಓಡಿಯನ್ ಸ್ಮಿತ್ 19 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್ ಪರ ಗರೆಥ್ ಡೆಲಾನಿ ಮೂರು ವಿಕೆಟ್ ಪಡೆದು ಮಿಂಚಿದ್ರೆ, ಸಿಮಿ ಸಿಂಗ್ ಮತ್ತು ಬ್ಯಾರಿ ಮೆಕಾರ್ಥಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.