ದುಬೈ:ಐಸಿಸಿ ಟಿ - 20 ವಿಶ್ವಕಪ್ ಯುಎಇನಲ್ಲಿ ನಡೆಸಲಾಗುವುದು ಎಂದು ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿ(BCCI) ಸ್ಪಷ್ಟನೆ ನೀಡಿದ್ದು, ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಚುಟುಕು ಕ್ರಿಕೆಟ್ ವಿಶ್ವಕಪ್ನ ಆರಂಭದ ದಿನಾಂಕ ಘೋಷಣೆ ಮಾಡಿದೆ.
ಟಿ-20 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹಂಚಿಕೊಂಡಿರುವ ಐಸಿಸಿ, ಯುಎಇ ಹಾಗೂ ಒಮನ್ನಲ್ಲಿ ಟೂರ್ನಿ ನಡೆಸುವುದಾಗಿ ಹೇಳಿಕೊಂಡಿದೆ. ಅಕ್ಟೋಬರ್ 17ರಿಂದ ಪಂದ್ಯಗಳು ಆರಂಭಗೊಳ್ಳಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತೀಯ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜನೆ ಮಾಡಲಿದೆ ಎಂದು ತಿಳಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮಾತನಾಡಿದ್ದ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟರ್ಸ್ ಹಿತದೃಷ್ಟಿಯಿಂದ ಯುಎಇನಲ್ಲಿ ಟೂರ್ನಿ ಆಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ ವಿಶ್ವಕಪ್ ಆರಂಭಗೊಳ್ಳಲಿದೆ ಎಂದಿದ್ದರು. ದುಬೈನ ಅಂತಾರಾಷ್ಟ್ರೀಯ ಮೈದಾನ, ಶೇಖ್ ಜಾಯೀದ್ ಸ್ಟೇಡಿಯಂ ಆಬುಧಾಬಿ, ಶಾರ್ಜಾ ಸ್ಟೇಡಿಯಂ ಹಾಗೂ ಓಮನ್ ಕ್ರಿಕೆಟ್ ಅಕ್ಯಾಡೆಮಿ ಮೈದಾನದಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ.
ಇದನ್ನೂ ಓದಿರಿ: ಕ್ರಿಕೆಟರ್ಸ್ ಹಿತದೃಷ್ಟಿಯಿಂದ ಯುಎಇನಲ್ಲಿ ಟಿ -20 ವಿಶ್ವಕಪ್: ಗಂಗೂಲಿ
ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್ನಲ್ಲಿ 16 ತಂಡಗಳು ಭಾಗಿಯಾಗುತ್ತಿದ್ದು, ಎರಡು ವಿಭಾಗಗಳಲ್ಲಿ ಮ್ಯಾಚ್ ಆಡಿಸಲು ಐಸಿಸಿ ನಿರ್ಧರಿಸಿದೆ. ಶ್ರೀಲಂಕಾ, ಐರ್ಲೆಂಡ್, ಬಾಂಗ್ಲಾದೇಶ, ನೇದರ್ಲ್ಯಾಂಡ್, ಓಮನ್, ಸ್ಕ್ಯಾಟ್ಲ್ಯಾಂಡ್, ನಮೆಬಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಇಂಗ್ಲೆಂಡ್, ಭಾರತ, ದಕ್ಷಿಣ ಆಪ್ರಿಕಾ, ಅಫ್ಘಾನಿಸ್ತಾನ ತಂಡಗಳು ಭಾಗಿಯಾಗುತ್ತಿವೆ.