ನವದೆಹಲಿ:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯಗಳು ಮುಕ್ತಾಯದ ಹಂತದಲ್ಲಿವೆ. ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಸೆಮಿಫೈನಲ್ ತಲುಪಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿಶ್ವಕಪ್ನಿಂದ ಹೊರಬಿದ್ದು ತವರು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಗ್ರೂಪ್ 2 ರಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ರೇಸ್ನಲ್ಲಿದ್ದು, ಕೊನೆಯ ಪಂದ್ಯ ಸೆಮೀಸ್ ಹಣೆಬರಹ ಬರೆಯಲಿವೆ.
ಕ್ರಿಕೆಟ್ ಶಿಶುಗಳಾದ ಐರ್ಲೆಂಡ್, ನೆದರ್ಲ್ಯಾಂಡ್ಸ್, ಜಿಂಬಾಬ್ವೆ ತಂಡಗಳು ಬಲಿಷ್ಠ ತಂಡಗಳಿಗೆ ದಂಗು ಬಡಿಸಿವೆ. ಜಿಂಬಾಬ್ವೆ ಪಾಕಿಸ್ತಾನದ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದಲ್ಲದೇ, ಆ ತಂಡದ ಸೆಮಿಫೈನಲ್ ಹಾದಿಗೆ ಮುಳ್ಳಾಯಿತು. ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಇಂಗ್ಲೆಂಡ್ಗೆ, ಐರ್ಲೆಂಡ್ ಕನಸಲ್ಲೂ ಕಾಡುವಂತೆ ಸೋಲುಣಿಸಿತು. ಇದು ಆ ತಂಡಗಳ ಮುಂದಿನ ಹಾದಿಗೆ ಅಡ್ಡಿಯುಂಟು ಮಾಡಿದವು.
ಆಸೀಸ್ಗೆ ತವರಲ್ಲೇ ಮುಖಭಂಗ:ಕಳೆದ ಆವೃತ್ತಿಯ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ 2022 ರ ಟಿ20 ವಿಶ್ವಕಪ್ ಅನ್ನು ತನ್ನದೇ ನೆಲದಲ್ಲಿ ಆಯೋಜಿಸಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಆಸೀಸ್ ಅದೃಷ್ಟದಾಟದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದು ತವರಿನ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡಿದೆ. ತವರು ನೆಲದ ಲಾಭ ಪಡೆದು ಈ ಬಾರಿಯೂ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಮಳೆ ಮತ್ತು ಅದೃಷ್ಟ ಎರಡೂ ಕೈಕೊಟ್ಟವು. 1 ಪಂದ್ಯ ಮಳೆಗೆ ಆಹುತಿಯಾಗಿತ್ತು.
ಬಡ್ತಿ ಪಡೆದ ನ್ಯೂಜಿಲ್ಯಾಂಡ್ ಇಂಗ್ಲೆಂಡ್:ಮೊದಲ ಗುಂಪಿನಲ್ಲಿ ಉತ್ತಮ ರನ್ ರೇಟ್ ಆಧಾರದ ಮೇಲೆ ನ್ಯೂಜಿಲ್ಯಾಂಡ್ ಮೊದಲ ತಂಡವಾಗಿ ಸೆಮಿಫೈನಲ್ ತಲುಪಿದರೆ, ಎರಡನೇ ತಂಡವಾಗಿ ಇಂಗ್ಲೆಂಡ್ ಬಡ್ತಿ ಪಡೆಯಿತು. ಗುಂಪಿನಲ್ಲಿದ್ದ ಶ್ರೀಲಂಕಾ, ಆಸ್ಟ್ರೇಲಿಯಾ, ಐರ್ಲೆಂಡ್, ಅಫ್ಘಾನಿಸ್ತಾನ ಮನೆಯ ದಾರಿ ಹಿಡಿದವು.