ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯು ದಿನದಿಂದ ದಿನಕ್ಕೆ ಕುತೂಹಲಕಾರಿ ಘಟ್ಟದತ್ತ ಸಾಗುತ್ತಿದೆ. ಬುಧವಾರ ಐರ್ಲೆಂಡ್ ತಂಡವು ಇಂಗ್ಲೆಂಡ್ಗೆ ಆಘಾತ ನೀಡಿದರೆ, ನ್ಯೂಜಿಲ್ಯಾಂಡ್ ಹಾಗೂ ಅಪ್ಘಾನಿಸ್ತಾನದ ನಡುವಿನ ಹಣಾಹಣಿಗೆ ಮಳೆಯಿಂದ ರದ್ದಾಗಿದೆ. ಅದಕ್ಕೂ ಹಿಂದಿನ ದಿನವೂ ಮಳೆಯಿಂದ ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೂ ವರುಣದೇವ ಅಡ್ಡಿಪಡಿಸಿದ್ದು, ಎರಡೂ ತಂಡಗಳು ತಲಾ ಒಂದು ಪಾಯಿಂಟ್ಸ್ ಹಂಚಿಕೊಂಡಿವೆ. ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವೊಂದರಲ್ಲಿ ನೆದರ್ಲ್ಯಾಂಡ್ಸ್ ತಂಡವು ಭಾರತವನ್ನು ಎದುರಿಸಲಿದ್ದು, ಮಳೆರಾಯ ಕಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಭಾರತವು ಪಾಕಿಸ್ತಾನದೊಂದಿಗಿನ ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಹುಮ್ಮಸ್ಸಿನಲ್ಲಿದೆ. ಆದರೆ, ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ಅನಿರೀಕ್ಷತೆಯನ್ನು ತಳ್ಳಿಹಾಕಲಾಗುವುದಿಲ್ಲ. ಸೆಮಿಫೈನಲ್ ಹಾದಿಯಲ್ಲಿ ಮಳೆಯೂ ಕೂಡ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಮಳೆಯಿಂದ ಪಂದ್ಯಗಳು ರದ್ದಾದರೆ, ಆಯಾ ತಂಡಗಳಿಗೆ ತಲಾ ಒಂದು ಅಂಕ ಬಂದರೂ ಕೂಡ, ಮುಂದಿನ ಹಂತಕ್ಕೆ ತಲುಪಲು ಬಲಿಷ್ಠ ಟೀಂಗಳಿಗೂ ಅದು ಮುಳುವಾಗುವ ಸಾಧ್ಯತೆ ಇದೆ.
ಇನ್ನು ನೆದರ್ಲ್ಯಾಂಡ್ಸ್ ತಂಡವು ಅನುಭವ ಮತ್ತು ಯುವಕರಿಂದ ಮಿಶ್ರಿತವಾಗಿದೆ. 22 ವರ್ಷದ ಯುವ ಆಟಗಾರ ಬಾಸ್ ಡಿ ಲೀಡೆ ಅವರಂತಹ ಪ್ರತಿಭೆ ಸೇರಿದಂತೆ 37 ವರ್ಷ ವಯಸ್ಸಿನ ರೋಲೋಫ್ ವ್ಯಾನ್ ಡೆರ್ ಮೆರ್ವೆ, 35 ವರ್ಷದ ಟಾಮ್ ಕೂಪರ್ ಅವರಂತಹ ಅನುಭವಿಗಳೂ ಸಹ ತಂಡದ ಬೆನ್ನೆಲುಬಾಗಿದ್ದಾರೆ.
ಈ ವರ್ಷ ಬಾಂಗ್ಲಾದೇಶ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಸೇರಿದಂತೆ ತಮ್ಮ ಎದುರಾಳಿಗಳ ವಿರುದ್ಧ ಉತ್ತಮ ಕ್ರಿಕೆಟ್ ಆಡಿರುವ ನೆದರ್ಲ್ಯಾಂಡ್ಸ್ ತಂಡವನ್ನು ಟೀಂ ಇಂಡಿಯಾ ಲಘುವಾಗಿ ಪರಿಗಣಿಸುವಂತಿಲ್ಲ. ನೆದರ್ಲ್ಯಾಂಡ್ಸ್ ತನ್ನ ಅಭಿಯಾನವನ್ನು ಬಾಂಗ್ಲಾದೇಶದ ವಿರುದ್ಧ 9 ರನ್‌ಗಳ ಸೋಲಿನೊಂದಿಗೆ ಪ್ರಾರಂಭಿಸಿದೆ.
ಇನ್ನೊಂದೆಡೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ನಾಲ್ಕು ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದ ಭಾರತ ಆತ್ಮವಿಶ್ವಾಸದಲ್ಲಿದೆ. ಪಾಕ್ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 82 ರನ್ ಮತ್ತು ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನ, ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ನಿಂದ ಮಿಂಚಿದ್ದರು. ಈ ಗೆಲುವಿನೊಂದಿಗೆ ಭಾರತ ಎರಡು ಅಂಕಗಳೊಂದಿಗೆ ಗುಂಪು 2ರಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ನೆದರ್ಲ್ಯಾಂಡ್ಸ್ ಒಂದು ಪಂದ್ಯವನ್ನು ಆಡಿದ್ದು, ಇನ್ನೂ ಅಂಕ ಗಳಿಸಿಲ್ಲ.
ದೊಡ್ಡ ಸ್ಕೋರ್ನತ್ತ ರೋಹಿತ್ ಚಿತ್ತ:ಭಾರತವು ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಮುಖಾಮುಖಿಯಾಗುವ ಹಿನ್ನೆಲೆಯಲ್ಲಿ ಅಗ್ರ ಕ್ರಮಾಂಕವು ಲಯ ಕಂಡುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಅ. 30ರಂದು ದಕ್ಷಿಣ ಆಫ್ರಿಕಾದೆದುರು ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ದೊಡ್ಡ ಸ್ಕೋರ್ ಗಳಿಸಲು ಎದುರು ನೋಡುತ್ತಿದ್ದಾರೆ.
ಅಲ್ಲದೇ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಇದೊಂದು ಮುಂದಿನ ಪಂದ್ಯಕ್ಕೆ ಸಜ್ಜುಗೊಳ್ಳಲು ಅತ್ಯುತ್ತಮ ಅವಕಾಶವಾಗಿದೆ.