ಕರ್ನಾಟಕ

karnataka

ETV Bharat / sports

T20 World Cup: ಹರಿಣಗಳ ವಿರುದ್ಧ ಟೀಂ ಇಂಡಿಯಾಗೆ ಸೋಲು - ಮುಗ್ಗರಿಸಿದ ರೋಹಿತ್​ ಪಡೆ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲನುಭವಿಸಿತು.

ಹರಿಣಗಳ ವಿರುದ್ಧ ಸೋತ ಟೀಂ ಇಂಡಿಯಾ
ಹರಿಣಗಳ ವಿರುದ್ಧ ಸೋತ ಟೀಂ ಇಂಡಿಯಾ

By

Published : Oct 30, 2022, 8:13 PM IST

Updated : Oct 30, 2022, 8:43 PM IST

ಪರ್ತ್ (ಆಸ್ಟ್ರೇಲಿಯಾ): ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲನುಭವಿಸಿತು. ಟೀಂ ಇಂಡಿಯಾ ನೀಡಿದ್ದ 134 ರನ್​ಗಳ ಸಾಧಾರಣ ಗುರಿಯನ್ನು 19.4 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಹರಿಣಗಳ ತಂಡ ತಲುಪಿತು. ಈ ಮೂಲಕ ದಕ್ಷಿಣ ಆಫ್ರಿಕಾ 5 ಅಂಕಗಳ ಮೂಲಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದು, 4 ಅಂಕಗಳೊಂದಿಗೆ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಇಳಿಯಿತು.

ಇಲ್ಲಿನ ಪರ್ತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ದಕ್ಷಿಣ ಆಫ್ರಿಕಾ ಬೌಲರ್​ಗಳು ಟೀಂ ಇಂಡಿಯಾ ಬ್ಯಾಟ್ಸಮನ್​ಗಳನ್ನು ಕಟ್ಟಿ ಹಾಕಿದ್ದರಿಂದ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್​ಗಳನ್ನು ಪೇರಿಸಲಷ್ಟೇ ಸಾಧ್ಯವಾಗಿತ್ತು. ಭಾರತ ಪರ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್​ ಬಾರಿಸಿದ್ದು ಬಿಟ್ಟರೆ ಉಳಿದ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಸಿದ್ರು.

ಆರಂಭದಲ್ಲಿ ಕೆ ಎಲ್ ರಾಹುಲ್ (9) ಮತ್ತು ರೋಹಿತ್ ಶರ್ಮಾ (15), ವಿರಾಟ್ ಕೊಹ್ಲಿ (12)ಯನ್ನು ಲುಂಗಿ ಎನ್ಗಿಡಿಗೆ ವಿಕೆಟ್ ಪಡೆದು, ಟೀಂ ಇಂಡಿಯಾಕ್ಕೆ ಮಾರಕವಾದರು. ಬಳಿಕ ಬಂದ ಸೂರ್ಯ ಯಾದವ್ 40 ಎಸೆತಗಳಲ್ಲಿ 68 ರನ್​ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ್ದರು. ಇನ್ನುಳಿದ ಆಟಗಾರರಾದ ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯಾ 2, ದಿನೇಶ್ ಕಾರ್ತಿಕ್ 6 ರನ್​ ಗಳಿಸಿದ್ರೆ. ರವಿಚಂದ್ರನ್ ಅಶ್ವಿನ್ 7, ಭುವನೇಶ್ವರ್ ಕುಮಾರ್ 4, ಮೊಹಮ್ಮದ ಶಮಿ 0, ಅರ್ಷದೀಪ್ ಸಿಂಗ್ 2 ರನ್ ಬಾರಿಸಿದ್ರು. ಹರಿಣಗಳ ಪರ ಲುಂಗಿ ಎನ್ಗಿಡಿ 4, ವೇಯನ್ ಪರ್ನೆಲ್ 3 ವಿಕೆಟ್ ಕಬಳಿಸಿ ಭಾರತ ತಂಡವನ್ನು ಕಟ್ಟಿ ಹಾಕಿದ್ದರು.

ಸಾಧಾರಣ ಗುರಿ ಬೆನ್ನತ್ತಿದ ಆಫ್ರಿಕಾಗೆ ಅರ್ಷದೀಪ್ ಸಿಂಗ್ ಆರಂಭದಲ್ಲೇ ಎರಡು ವಿಕೆಟ್ ಪಡೆದು ಆಘಾತ ನೀಡಿದರು. ಕ್ವಿಂಟಾನ್ ಡಿ ಕಾಕ್ 1 ಮತ್ತು ರಿಲೀ ರೋಸ್ಸೋ ಸೊನ್ನೆ ಸುತ್ತಿ ಔಟಾದರು. ಬಳಿಕ ಟೆಂಬಾ ಬಾವುವಾ 10 ರನ್ ಗಳಿಸಿದ್ದಾಗ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಏಡೆನ್ ಮಾರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಕ್ರಮವಾಗಿ 52 ಹಾಗೂ 59 ರನ್ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿ ಜಯದ ದಡಕ್ಕೆ ಕೊಂಡೊಯ್ದರು.

ತಂಡದ ಮೊತ್ತ 100 ರನ್ ತಲುಪಿದಾಗ ಏಡೆನ್ ಔಟಾದರು. ಬಳಿಕ ಟ್ರಿಸ್ಟನ್ ಸ್ಟಬ್ಸ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಜೊತೆಗೂಡಿ ವೇಯನ್ ಪರ್ನೆಲ್ ತಂಡವನ್ನು ಜಯದ ಗಡಿ ದಾಟಿಸಿದರು. ಭಾರತ ಪರ ಅರ್ಷದೀಪ್ ಸಿಂಗ್ 2, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯಾ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.

Last Updated : Oct 30, 2022, 8:43 PM IST

ABOUT THE AUTHOR

...view details