ಸಿಡ್ನಿ:ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ರಿಲೆ ರುಸ್ಸೋ ಅಬ್ಬರದ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕ ಹಾಗೂ ಹರಿಣಗಳ ಮಾರಕ ದಾಳಿಗೆ ಸಿಲುಕಿದ ಬಾಂಗ್ಲಾದೇಶ 104 ರನ್ಗಳ ಹೀನಾಯ ಸೋಲುಂಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಗ್ರೂಪ್ 2 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿ ಬಾಂಗ್ಲಾಕ್ಕೆ 206 ರನ್ಗಳ ಗೆಲುವಿನ ಗುರಿ ನೀಡಿತ್ತು. ಇನ್ನಿಂಗ್ಸ್ ಆರಂಭಿಸಿದ ನಾಯಕ ತೆಂಬಾ ಬವುಮಾ 2 ರನ್ಗೆ ವಿಕೆಟ್ ಒಪ್ಪಿಸಿದರೂ ಕೂಡ, ಬಳಿಕ ರುಸ್ಸೋ ಹಾಗೂ ಡಿ ಕಾಕ್ ಅಬ್ಬರದ ಜೊತೆಯಾಟವಾಡಿ ಬಾಂಗ್ಲಾ ಬೌಲರ್ಗಳ ಬೆವರಿಳಿಸಿದರು.
ಇಬ್ಬರೂ ಎಡಗೈ ಬ್ಯಾಟರ್ಗಳು 2ನೇ ವಿಕೆಟ್ಗೆ 168 ರನ್ಗಳ ಅಮೋಘ ಜೊತೆಯಾಟವಾಡಿದರು. ಬಾಂಗ್ಲಾದೇಶದ ಬೌಲರ್ಗಳ ಮೇಲೆ ದಂಡೆತ್ತಿ ಹೋದ ರುಸ್ಸೋ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್ ಬಾರಿಸಿದರೆ, ಡಿ ಕಾಕ್ 38 ಬಾಲ್ಗಳಲ್ಲಿ 63 ರನ್ ಚಚ್ಚಿದರು. ಇನ್ನುಳಿದ ಬ್ಯಾಟರ್ಗಳು ನಿರೀಕ್ಷಿತ ಆಟ ಪ್ರದರ್ಶಿಸದಿದ್ದರೂ ಸಹ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಬಾಂಗ್ಲಾ ಪರ ನಾಯಕ ಶಕೀಬ್ 2 ವಿಕೆಟ್ ಪಡೆದರು.