ಸಿಡ್ನಿ(ಆಸ್ಟ್ರೇಲಿಯಾ):ಆರಂಭಿಕ ಮೊದಲೆರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಪಾಕಿಸ್ತಾನ, ಪುಟಿದೆದ್ದು ನಂತರದ ಎಲ್ಲ ಮ್ಯಾಚ್ಗಳಲ್ಲಿ ಗೆದ್ದು ಸೆಮಿಫೈನಲ್ ತಲುಪಿದೆ. ಗ್ರೂಪ್ 1 ರ ಅಗ್ರಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಸಿಡ್ನಿಯಲ್ಲಿ ನವೆಂಬರ್ 9 ರಂದು (ನಾಳೆ) ಮುಖಾಮುಖಿಯಾಗಲಿದೆ.
ಬಾಬರ್ ಅಜಮ್ ನೇತೃತ್ವದ ತಂಡ ಮುಂಚೂಣಿ ಪಂದ್ಯಗಳಲ್ಲಿ ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋತಿತ್ತು. ಇದು ತಂಡದ ಆಯ್ಕೆ ಮತ್ತು ಆಟದ ಮೇಲೆ ಭಾರೀ ಟೀಕೆ ಕೇಳಿ ಬಂದಿತ್ತು. ಬಳಿಕ ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಭಾರತದ ಜೊತೆಗೆ ಗ್ರೂಪ್ 2 ರ ನಾಲ್ಕರಘಟ್ಟಕ್ಕೆ ಪ್ರವೇಶ ಪಡೆದಿದೆ.
ಪಾಕ್ನ ಅಗ್ರ ಬ್ಯಾಟರ್ಗಳ ವೈಫಲ್ಯ:ಪಾಕಿಸ್ತಾನ ತಂಡ ಬೌಲಿಂಗ್ನಲ್ಲಿ ಬಿಗಿ ಹಿಡಿತ ಸಾಧಿಸಿದರೂ, ಅಗ್ರ ಬ್ಯಾಟರ್ಗಳ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ಹೊಡಿಬಡಿ ಆಟಗಾರ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಬ್ಯಾಟಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ರನ್ಗಾಗಿ ಪರದಾಡುತ್ತಿರುವ ಇಬ್ಬರೂ ಸೆಮೀಸ್ನಲ್ಲಿ ಮಿಂಚಿದರೆ ತಂಡಕ್ಕೆ ನೆರವಾಗಲಿದೆ.
ಆಲ್ರೌಂಡರ್ಗಳಾದ ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದರೆ, ಶಾನ್ ಮಸೂದ್, ಮೊಹಮ್ಮದ್ ಹ್ಯಾರಿಸ್ ಬ್ಯಾಟ್ ಝಳಪಿಸಬೇಕಿದೆ. ಬೌಲಿಂಗ್ನಲ್ಲಿ ಮತ್ತೆ ಲಯ ಕಂಡುಕೊಂಡಿರುವ ಶಾಹೀನ್ ಆಫ್ರಿದಿ ಕಳೆದ ಬಾಂಗ್ಲಾದೇಶ ವಿರುದ್ಧ 4 ವಿಕೆಟ್ ಕಿತ್ತು ಮಿಂಚಿದ್ದರು. ರೌಫ್ ಹ್ಯಾರೀಸ್, ನಸೀಮ್ ಶಾ ವೇಗದ ಬೌಲಿಂಗ್ ನಿಭಾಯಿಸಲಿದ್ದಾರೆ.
ನ್ಯೂಜಿಲ್ಯಾಂಡ್ಗೆ ಫೈನಲ್ ಗುರಿ:ಬ್ಯಾಟಿಂಗ್, ಬೌಲಿಂಗ್ನಲ್ಲಿ ಮಿಂಚು ಹರಿಸಿರುವ ನ್ಯೂಜಿಲ್ಯಾಂಡ್ ತಂಡ ಫೈನಲ್ ಕನಸು ಕಾಣುತ್ತಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಮೂರು ಗೆದ್ದು 7 ಅಂಕ ಗಳಿಸಿ (1 ಪಂದ್ಯ ಮಳೆಯಿಂದ ರದ್ದು) ಅಗ್ರಸ್ಥಾನಿಯಾಗಿ ಸೆಮೀಸ್ಗೆ ಬಂದಿದೆ.