ಶಾರ್ಜಾ:ಐಸಿಸಿ ಟಿ-20 ವಿಶ್ವಕಪ್ನ ಸೂಪರ್ 12 ಹಂತದ ಗ್ರೂಪ್ 2ನಲ್ಲಿಂದು ಬಲಿಷ್ಠ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಲಿವೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಭಾರೀ ಕುತೂಹಲ ಮೂಡಿಸಿದೆ.
ಈಚೆಗೆ ಕ್ರಿಕೆಟ್ ಸರಣಿ ಆಡಲು ಪಾಕಿಸ್ತಾನಕ್ಕೆ ತೆರಳಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತೆಯ ನೆಪ ಹೇಳಿ ಅಲ್ಲಿಂದ ದಿಢೀರ್ ಆಗಿ ವಾಪಸ್ ಆಗಿತ್ತು. ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿತ್ತು. ಜೊತೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಇದೀಗ ಈ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಬಾಬರ್ ಆಜಂ ತಂಡ ಕಣಕ್ಕಿಳಿಯಲಿದೆ. ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿಯಾಗಿ ಗೆಲುವು ದಾಖಲು ಮಾಡಿರುವ ಪಾಕ್ ತಂಡ, ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಧೃಡವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ತೀವ್ರ ಸ್ಪರ್ಧೆ ಉಂಟಾಗಲಿದೆ.
ಇದನ್ನೂ ಓದಿರಿ:T20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ದಾಖಲೆಯ 130ರನ್ಗಳ ಜಯ ಸಾಧಿಸಿದ ಆಫ್ಘನ್
ನ್ಯೂಜಿಲ್ಯಾಂಡ್ ತಂಡ ಅಭ್ಯಾಸ ಪಂದ್ಯಗಳಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಜೊತೆಗೆ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಫಿಟ್ನೆಟ್ ಬಗ್ಗೆ ಅನೇಕ ಅನುಮಾನವಿದೆ. ಉಭಯ ತಂಡಗಳು ಇಲ್ಲಿಯವರೆಗೆ 24 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಾಕ್ 14 ಹಾಗೂ ನ್ಯೂಜಿಲ್ಯಾಂಡ್ 10 ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ ಕೇನ್ ವಿಲಿಯಮ್ಸನ್ ಬಳಗ ದುಬೈನಲ್ಲಿ ಪಾಕ್ ವಿರುದ್ಧ ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಸೋಲು ಕಂಡಿದೆ.