ಮುಂಬೈ: ಒಮಾನ್ ಮತ್ತು ಯುಎಇಯಲ್ಲಿ ನಡೆಯುತ್ತಿರುವ 2021ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಟ್ರೋಪಿ ಗೆಲ್ಲುವ ನೆಚ್ಚಿನ ತಂಡವಾಗಿದೆ, ಇಲ್ಲಿನ ಪರಿಸ್ಥಿತಿ ಅವರಿಗೆ ಸೂಕ್ತವಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಗಲ್ಫ್ ರಾಷ್ಟ್ರದ ಪರಿಸ್ಥಿತಿ ಹೆಚ್ಚು ಕಡಿಮೆ ಉಪಖಂಡದಂತಿರುವುದರಿಂದ ವಿರಾಟ್ ಕೊಹ್ಲಿ ಬಳಗ ವಿಶ್ವಕಪ್ ಎತ್ತಿ ಹಿಡಿಯಲು ಅತ್ಯುತ್ತಮ ಅವಕಾಶ ಹೊಂದಿದೆ. ಇದೇ ಅವರನ್ನು ಟೂರ್ನಮೆಂಟ್ನಲ್ಲಿ ಅತ್ಯಂತ ಅಪಾಯಕಾರಿ ತಂಡವನ್ನಾಗಿ ಮಾಡಿದೆ ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
"ಯಾವುದೇ ಪಂದ್ಯಾವಳಿಯಲ್ಲಿ, ಒಂದು ನಿರ್ದಿಷ್ಟ ತಂಡ ಗೆಲ್ಲುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಗೆಲ್ಲಲು ಎಷ್ಟು ಅವಕಾಶವಿದೆ ಎಂಬುದರ ಬಗ್ಗೆ ಅಷ್ಟೆ ಹೇಳಬಹುದು. ನನ್ನ ಪ್ರಕಾರ ಈ ಟೂರ್ನಮೆಂಟ್ಅನ್ನು ಗೆಲ್ಲುವ ಇತರ ತಂಡಗಳಿಗಿಂತ ಭಾರತಕ್ಕೆ ಹೆಚ್ಚಿನ ಅವಕಾಶವಿದೆ, ಅವರು ಅನುಭವವುಳ್ಳ ಟಿ-20 ಆಟಗಾರರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ರೀತಿಯ ಪರಿಸ್ಥಿತಿಗಳಲ್ಲಿ ಭಾರತ ನೆಚ್ಚಿನ ತಂಡ "ಎಂದು ಇಂಜಮಾಮ್ ಭಾರತ ಏಕೆ ಟ್ರೋಫಿ ಎತ್ತಿ ಹಿಡಿಯುವ ತಂಡ ಎನ್ನುವುದನ್ನು ವಿವರಿಸಿದ್ದಾರೆ.