ಸಿಡ್ನಿ(ಆಸ್ಟ್ರೇಲಿಯಾ):ಬ್ಯಾಟಿಂಗ್, ಬೌಲಿಂಗ್ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಭಾರತ, ಸಿಡ್ನಿ ಮೈದಾನದಲ್ಲಿ ಕ್ರಿಕೆಟ್ ಕೂಸು ನೆದರ್ಲ್ಯಾಂಡ್ ವಿರುದ್ಧ ನಡೆದ ಗುಂಪು ಹಂತದ 2ನೇ ಪಂದ್ಯದಲ್ಲಿ 56 ರನ್ಗಳ ಮತ್ತೊಂದು ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಬಲದಿಂದ 179 ರನ್ ಗಳಿಸಿತು. ನೆದರ್ಲ್ಯಾಂಡ್ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಗೆ ಸೋಲೊಪ್ಪಿಕೊಂಡಿತು.
ಬೌಲಿಂಗ್ ಬಿಗಿಹಿಡಿತಕ್ಕೆ ನಲುಗಿದ ಡಚ್ಚರು:ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಭಾರತದ ಆಟಗಾರರಿಗೆ ಕ್ರಿಕೆಟ್ ಪಾಠ ಕಲಿಯುತ್ತಿರುವ ನೆದರ್ಲ್ಯಾಂಡ್ ಯಾವುದೇ ಹಂತದಲ್ಲಿ ಸವಾಲು ಆಗಲಿಲ್ಲ. ಆರಂಭದಿಂದಲೇ ಡಚ್ ಆಟಗಾರರ ಮೇಲೆ ಸವಾರಿ ಮಾಡಿದ ಬೌಲರ್ಗಳು ರನ್ ಗಳಿಸಲು ಅವಕಾಶ ನೀಡಲಿಲ್ಲ.
3 ಓವರ್ ಎಸೆದ ಭುವನೇಶ್ವರ್ ಕುಮಾರ್ 2 ಓವರ್ ಮೇಡನ್ ಮಾಡಿ 9 ರನ್ಗೆ 2 ವಿಕೆಟ್ ಕಿತ್ತು ಪ್ರಭಾವಿಯಾದರು. ಇನ್ನೊಂದು ತುದಿಯಲ್ಲಿ ಮೊದಲ ಪಂದ್ಯದ ಹೀರೋ ಅರ್ಷದೀಪ್ ಸಿಂಗ್, ಸ್ಪಿನ್‌ದ್ವಯರಾದ ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಉರುಳಿಸಿದರು. ಮೊಹಮದ್ ಶಮಿ 1 ವಿಕೆಟ್ ಕಿತ್ತರು.
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಡಚ್ ಆಟಗಾರರು ದೊಡ್ಡ ಸಹಭಾಗಿತ್ವ ಕಟ್ಟಲಿಲ್ಲ. ಟಿಮ್ ಪ್ರಿಂಗ್ಲೆ 20 ರನ್ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಮ್ಯಾಕ್ಸ್ ಡೌಡ್, ಬಸ್ ಡೆ ಲಿಡೆ, ಶಾರೀಜ್ ಅಹ್ಮದ್ ತಲಾ 16 ರನ್ ಗಳಿಸಿದರೆ, ಕೊಲಿನ್ ಅಕ್ಕರ್ಮನ್ 17 ರನ್ ಮಾಡಿದರು. ಇದರಿಂದ 20 ಓವರ್ಗಳಲ್ಲಿ 9 ವಿಕೆಟ್ಗೆ 123 ರನ್ ಮಾತ್ರ ಗಳಿಸಲು ಶಕ್ತವಾಯಿತು. ಆಡಿದ 2 ಪಂದ್ಯಗಳಲ್ಲಿ ಡಚ್ಚರು ಎರಡನ್ನೂ ಸೋತು ಪಟ್ಟಿಯಲ್ಲಿ ಕೆಳ ಹಂತಕ್ಕೆ ಕುಸಿದರು.