ಮೆಲ್ಬರ್ನ್(ಆಸ್ಟ್ರೇಲಿಯಾ):ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಮೆರೆದಾಡಿದರು. ಪಾಕಿಸ್ತಾನ ನೀಡಿದ 160 ರನ್ಗಳ ಸವಾಲನ್ನು ಮೆಟ್ಟಿನಿಂತ ಭಾರತ ಜಯದ ನಗೆ ಬೀರಿತು.
ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಭಾರತ- ಪಾಕಿಸ್ತಾನದ ಪಂದ್ಯ ರಣರೋಚಕತೆಗೆ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ಪಂದ್ಯವನ್ನು ಜೀವಂತವಾಗಿಟ್ಟಿತ್ತು.
ಬೌಲರ್ಗಳಿಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 159 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ ತಂಡವು ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟದಿಂದ 6 ವಿಕೆಟ್ಗೆ 160 ರನ್ ಬಾರಿಸಿ, ವಿಶ್ವಕಪ್ನಲ್ಲಿ ಗೆಲುವಿನ ಅಭಿಯಾನ ಆರಂಭಿಸಿತು.
ವಿರಾಟ್ ರಶ್, ಪಾಕಿಸ್ತಾನ್ ಕ್ರಶ್:ಬ್ಯಾಟಿಂಗ್ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಹಳೆಯ ಖದರ್ ತೋರಿಸಿದರು. ಆರಂಭಿಕ ಬ್ಯಾಟರ್ಗಳು ಕೈಕೊಟ್ಟು ಕುಸಿತದ ಭೀತಿಯಲ್ಲಿದ್ದ ಭಾರತವನ್ನು ಏಕಾಂಗಿಯಾಗಿ ಹೋರಾಡಿ ವಿರಾಟ್ ಕೊನೆಯವರೆಗೂ ಔಟಾಗದೇ ಪಂದ್ಯ ಗೆಲ್ಲಿಸಿದರು. 53 ಎಸೆತಗಳಲ್ಲಿ 82 ರನ್ ಚಚ್ಚಿದ ವಿರಾಟ್ ಇನ್ನಿಂಗ್ಸ್ನಲ್ಲಿ ಅತ್ಯಮೂಲ್ಯ 4 ಸಿಕ್ಸರ್, 6 ಬೌಂಡರಿಗಳಿದ್ದವು. ಕೊಹ್ಲಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯಾ 2 ಸಿಕ್ಸರ್ 1 ಬೌಂಡರಿ ಸಮೇತ 40 ರನ್ ಬಾರಿಸಿದರು.
ಮೊದಲು 45, ಬಳಿಕ 115:ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಅಕ್ಸರ್ ಪಟೇಲ್ ಔಟಾದಾಗ ಭಾರತದ ಬೋರ್ಡ್ನಲ್ಲಿ 31 ರನ್ ಮಾತ್ರ ಇತ್ತು. ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯಾ ಎಚ್ಚರಿಕೆಯ ಆಟವಾಡುವುದರ ಜೊತೆಗೆ ಶತಕದ ಜೊತೆಯಾಟ ಮುಗಿಸಿದರು.
ಭಾರತ ಮೊದಲ 10 ಓವರ್ಗಳಲ್ಲಿ ಕೇವಲ 45 ರನ್ ಮಾತ್ರ ಗಳಿಸಿತ್ತು. ಬಳಿಕದ 10 ಓವರ್ಗಳಲ್ಲಿ ವಿರಾಟ್, ಪಾಂಡ್ಯಾ ಬ್ಯಾಟಿಂಗ್ ವೈಭವದಿಂದ 115 ರನ್ಗಳು ಹರಿದುಬಂದವು. ಪಾಕಿಸ್ತಾನದ ಪರವಾಗಿ ಮೊಹಮದ್ ನವಾಜ್, ಹ್ಯಾರೀಸ್ ರೌಫ್ ತಲಾ 2 ವಿಕೆಟ್ ಕಿತ್ತರೆ, ನಸೀಮ್ ಶಾ 1 ವಿಕೆಟ್ ಪಡೆದರು.
ಓದಿ:T20 World Cup: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಪಾಕ್ ತತ್ತರ.. ಭಾರತಕ್ಕೆ 160 ರನ್ ಗುರಿ