ಮೆಲ್ಬೋರ್ನ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ ಟೂರ್ನಿಯಲ್ಲಿಸೆಮಿಫೈನಲ್ ತಲುಪಿರುವ ಭಾರತ ತನ್ನ ಔಪಚಾರಿಕ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ 20 ಓವರ್ಗಳಲ್ಲಿ 5 ವಿಕೆಟ್ಗೆ 186 ರನ್ ಗಳಿಸಿ ಸವಾಲಿನ ಗುರಿ ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ನಾಯಕ ರೋಹಿತ್ ಶರ್ಮಾರನ್ನು ಬೇಗನೇ ಕಳೆದುಕೊಂಡಿತು. 15 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಭರ್ಜರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸಿಗೆ ಬಂದ ಈ ವಿಶ್ವಕಪ್ನ ಅತ್ಯಧಿಕ ರನ್ನರ್ ವಿರಾಟ್ ಕೊಹ್ಲಿ 26 ರನ್ ಗಳಿಸಿ ಔಟಾದರು.
ರಾಹುಲ್ಗೆ ಐವತ್ತರ ಕಾಟ:ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸದೇ ಟೀಕೆಗೆ ಗುರಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಸತತ 2 ನೇ ಅರ್ಧಶತಕ ಗಳಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 50 ರನ್ ಗಳಿಸಿ ಔಟಾಗಿದ್ದ ರಾಹುಲ್ ಈ ಪಂದ್ಯದಲ್ಲೂ ಸಿಕ್ಸರ್ ಸಿಡಿಸಿ 51 ರನ್ ಗಳಿಸಿದರು. ಮರು ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ಎರಡು ಬಾರಿಯೂ ಅರ್ಧಶತಕ ಗಳಿಸಿದ ಮರು ಎಸೆತದಲ್ಲೇ ವಿಕೆಟ್ ನೀಡಿ ಐವತ್ತರ ಕಾಟ ಅನುಭವಿಸಿದರು.
ವೇಗದ ಅರ್ಧಶತಕ, 4 ನೇ ಆಟಗಾರ ಸೂರ್ಯ:ಚುಟುಕು ಕ್ರಿಕೆಟ್ನ ನಂ.1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ವಿಶ್ವಕಪ್ನಲ್ಲಿ ವೇಗದ ಫಿಫ್ಟಿ ಬಾರಿಸಿದ ಭಾರತದ 4ನೇ ಆಟಗಾರ ಮತ್ತು ಈ ಸಾಲಿನಲ್ಲಿ ಮೂರನೇ ಅರ್ಧಶತಕ ಬಾರಿಸಿದರು. ವಿರಾಟ್ ಕೊಹ್ಲಿ ಔಟಾದ ಬಳಿಕ ಮೈದಾನಕ್ಕಿಳಿದ ಸೂರ್ಯ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕಿಳಿದರು. 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ ವಿಶ್ವಕಪ್ನಲ್ಲಿ ದಾಖಲೆ ಬರೆದರು.
ಈ ಮೊದಲು ಯುವರಾಜ್ ಸಿಂಗ್ 12 ಮತ್ತು 20 ಎಸೆತ, ಕೆ ಎಲ್ ರಾಹುಲ್ 18 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರರು. ಅಲ್ಲದೇ, ಸೂರ್ಯಕುಮಾರ್ ಯಾದವ್ 193.96 ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದು, ಇದು ವಿಶ್ವಕಪ್ನಲ್ಲಿ ದಾಖಲಾದ ವೇಗದ ಬ್ಯಾಟಿಂಗ್ ಆಗಿದೆ. ಈ ಹಿಂದೆ 2010 ರಲ್ಲಿ 175.70 ರ ಸರಾಸರಿಯಲ್ಲಿ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಬ್ಯಾಟ್ ಬೀಸಿದ್ದರು.
ಅವಕಾಶ ಕೈ ಚೆಲ್ಲಿದ ಪಂತ್:ಕಳಪೆ ಬ್ಯಾಟಿಂಗ್ನಿಂದಾಗಿ ವಿಶ್ವಕಪ್ನಲ್ಲಿ ಬೆಂಚ್ ಕಾದಿದ್ದ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಜಿಂಬಾಬ್ವೆ ವಿರುದ್ಧ ಅವಕಾಶ ಮಾಡಿಕೊಡಲಾಯಿತು. ದಿನೇಶ್ ಕಾರ್ತಿಕ್ ಬದಲಾಗಿ ಕಣಕ್ಕಿಳಿದ ಪಂತ್ 3 ರನ್ ಗಳಿಸಿ ಔಟಾಗಿ ಕಳಪೆ ಆಟ ಮುಂದುವರಿಸಿದರು. ಜಿಂಬಾಬ್ವೆ ಪರವಾಗಿ ಸೀನ್ ವಿಲಿಯಮ್ಸನ್ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಅಖಾಡ: ಭಾರತ-ನ್ಯೂಜಿಲ್ಯಾಂಡ್, ಇಂಗ್ಲೆಂಡ್-ಪಾಕಿಸ್ತಾನ ಮಧ್ಯೆ ಫೈಟ್