ಮೆಲ್ಬರ್ನ್(ಆಸ್ಟ್ರೇಲಿಯಾ): ಟಿ20 ವಿಶ್ವಕಪ್ನ ಅತ್ಯಂತ ಮಹತ್ವದ ಪಂದ್ಯಗಳಲ್ಲೊಂದಾದ ಭಾರತ- ಪಾಕಿಸ್ತಾನ ತಂಡಗಳ ಕದನಕ್ಕೆ ಇಂದು ಮೆಲ್ಬರ್ನ್ನ ಕ್ರೀಡಾಂಗಣ ಆತಿಥ್ಯವಹಿಸಿದೆ. ಐಸಿಸಿ ನಡೆಸುವ ಟೂರ್ನಿಗಳಲ್ಲಿ ಮಾತ್ರ ಸಾಂಪ್ರದಾಯಿಕ ವೈರಿಗಳು ಎದುರಾಗುವುದರಿಂದ ಪಂದ್ಯದ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚು. ಇದೀಗ 37 ವರ್ಷಗಳ ನಂತರ ಎಂಸಿಜಿ ಮೈದಾನದಲ್ಲಿ ಬದ್ಧ ವೈರಿಗಳು ಎದುರಾಗುತ್ತಿದ್ದಾರೆ.
ಇಂದಿನ ಪಂದ್ಯ ಭಾರತಕ್ಕೆ ಸೇಡಿನ ಕದನವೆಂದೇ ಹೇಳಬಹುದು. 2021ರ ಅಕ್ಟೋಬರ್ 24ರಂದು ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನದೆದುರು ಹೀನಾಯ ಸೋಲನುಭವಿಸಿತ್ತು. ಇತ್ತೀಚೆಗೆ ನಡೆದ ಏಷ್ಯಾ ಕಪ್ನಲ್ಲಿ ನಡೆದ ಎರಡು ಬಾರಿಯ ಮುಖಾಮುಖಿಯಲ್ಲಿ ಭಾರತ ಒಂದನ್ನು ಗೆದ್ದು ಮತ್ತೊಂದರಲ್ಲಿ ಸೋಲನುಭವಿಸಿತ್ತು. ಇದರ ಸೇಡು ತೀರಿಸಿಕೊಳ್ಳಲು ಭಾರತ ಇಂದು ಸನ್ನದ್ಧವಾಗಿದೆ.
ಭಾರತ-ಪಾಕಿಸ್ತಾನದ ಮಹಾ ಪೈಪೋಟಿ ವೀಕ್ಷಿಸಲು ಪ್ರೇಕ್ಷಕರು ಕಾಂಗರೂ ನಾಡಿನಲ್ಲಿ ಕಾತರದಿಂದ ಕಾಯುತ್ತಿದ್ದಾರೆ. ದೀಪಾವಳಿಯ ಮುನ್ನಾದಿನವಾದ ಇಂದು ಪಟಾಕಿ ಹಚ್ಚುವ ಮೋಕಾವನ್ನು ಯಾವ ತಂಡ ಯಾರಿಗೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. ಧೋನಿ ನಾಯಕತ್ವದಲ್ಲಿ ವಿಶ್ವಕಪ್ನ ಪಂದ್ಯಗಳಲ್ಲಿ ಪಾಕ್ ವಿರುದ್ಧ ಸೋಲು ಕಾಣದ ಭಾರತವನ್ನು ಹೋದ ವರ್ಷದ ಸೋಲಿನ ಬಿಸಿ ಕಾಡುತ್ತಿದೆ. ವಿರಾಟ್, ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಆ ಪಂದ್ಯಕ್ಕೆ ಉತ್ತರ ನೀಡಲು ಸಜ್ಜಾಗಿದ್ದಾರೆ.
ಉತ್ತಮ ಆರಂಭದ ನಿರೀಕ್ಷೆ:ರಾಹುಲ್ ಮತ್ತು ರೋಹಿತ್ ಶರ್ಮಾ ಅವರಿಂದ ಉತ್ತಮ ಆರಂಭದ ನಿರೀಕ್ಷೆ ಇದೆ. ಕಳಪೆ ಸ್ಟ್ರೈಕ್ ರೇಟ್ ಆರೋಪಕ್ಕೆ ಬಿರುಸಿನ ಆಟದಿಂದಲೇ ಉತ್ತರ ನೀಡಿದ್ದ ಕೆ ಎಲ್ ರಾಹುಲ್ ಮೇಲೆ ಜವಾಬ್ದಾರಿ ಹೆಚ್ಚಿದೆ. ಟಿ20ಯ ಯಶಸ್ವಿ ನಾಯಕನೆಂಬ ಹೆಸರು ಪಡೆದ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿಯ ಹೊರೆಯೊಂದಿಗೆ ತಂಡಕ್ಕೆ ಆರಂಭಿಕ ಜೊತೆಯಾಟ ನೀಡುವ ಜವಾಬ್ದಾರಿಯೂ ಇದೆ.
ಫಾರ್ಮ್‌ಗೆ ಮರಳಿರುವ ಕೊಹ್ಲಿ: ಸುಮಾರು ಎರಡು ವರ್ಷಗಳಿಂದ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಕೊಹ್ಲಿ ಸುದೀರ್ಘ ವಿಶ್ರಾಂತಿಯ ನಂತರ ಏಷ್ಯಾ ಕಪ್ನಲ್ಲಿ ಲಯಕ್ಕೆ ಬಂದಿದ್ದರು. ಏಷ್ಯಾ ಕಪ್ನಲ್ಲಿ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ ಅಜೇಯ 122 ರನ್ ಗಳಿಸಿದ್ದರು. ನಂತರ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ರನ್ ರೈಸರ್ ಸೂರ್ಯ:ಟಿ20 ವಿಶ್ವಕಪ್ನಲ್ಲಿ ಟತೀ ಹೆಚ್ಚು ನಿರೀಕ್ಷೆ ಇರುವ ಆಟಗಾರರಲ್ಲಿ ಸೂರ್ಯ ಕುಮಾರ್ ಯಾದವ್ ಪ್ರಮುಖರು. ಚುಟುಕು ಕದನದಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಇವರ ಬ್ಯಾಟಿಂಗ್ ಮೇಲೆ ಎಲ್ಲರಿಗೂ ಕುತೂಹಲವಿದೆ. ಕೆಳ ಕ್ರಮಾಂಕದಲ್ಲಿ ಪಂತ್ ಅಥವಾ ಅನುಭವಿ ಕಾರ್ತಿಕ್ ಜೊತೆಗೆ ತಂಡಕ್ಕೆ ಉತ್ತಮ ರನ್ ಗಳಿಸಿ ಕೊಡುತ್ತಿರುವ ಇವರು ವಿನ್ನಿಂಗ್ ಕೀ ಎಂದೇ ಹೇಳಬಹುದು. ಸೂರ್ಯ ಜತೆ ಹಾರ್ದಿಕ್ ಕೂಡ ಆಲ್ರೌಂಡ್ ಪ್ರದರ್ಶನ ನೀಡಬೇಕಿದೆ.
ಅಂತಿಮ ಓವರ್ಗಳ ಹಿಡಿತದ ಒತ್ತಡ:ಭಾರತದ ಬೌಲಿಂಗ್ ಡೆತ್ ಓವರ್ಗಳಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಏಷ್ಯಾ ಕಪ್‌ನ ಎರಡು ಪಂದ್ಯಗಳಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಕಳಪೆ ಸ್ಪೆಲ್ಗೆ ದಿಗ್ಗಜರು ಟೀಕೆ ಮಾಡಿದ್ದರು. ಬೂಮ್ರಾರ ಅನುಪಸ್ಥಿತಿಯಲ್ಲಿ ಕರಾರುವಾಕ್ ಬೌಲಿಂಗ್ ಪ್ರದರ್ಶನದ ಅಗತ್ಯವಿದೆ. ಹಾಗಾಗಿ, ಕೋವಿಡ್ನಿಂದ ಚೇತರಿಸಿಕೊಂಡು ಬೂಮ್ರಾ ಜಾಗಕ್ಕೆ ಬಂದಿರುವ ಶಮಿ ಮೇಲೆ ಒತ್ತಡ ತುಸು ಹೆಚ್ಚೇ ಇದೆ.
ಅಶ್ವಿನ್ ಕಣಕ್ಕೆ ಬರುವ ಸಾಧ್ಯತೆ:ಪಾಕಿಸ್ತಾನ ಪರ ಮೂವರು ಎಡಗೈ ಬ್ಯಾಟರ್ಗಳು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದು ತಂಡ ಅಶ್ವಿನ್ಗೆ ಮಣೆ ಹಾಕುವಂತೆ ತೋರುತ್ತಿದೆ. ಆಸ್ಟ್ರೇಲಿಯಾ ಹಾಗು ಇಂಗ್ಲೆಂಡ್ನ ವೇಗದ ಪಿಚ್ಗಳಲ್ಲಿ ಅನುಭವ ಹೊಂದಿರುವ ಅಶ್ವಿನ್ಗೆ ನವಾಜ್ ಮತ್ತು ಖುಶ್ದಿಲ್ ಶಾರನ್ನು ಕಟ್ಟಿ ಹಾಕುವ ಜವಾಬ್ದಾರಿ ನೀಡುವ ಚಿಂತನೆ ಇದೆ.
ಕಾಡಲಿರುವ ಅಜಂ, ರಿಜ್ವಾನ್:ಪಾಕಿಸ್ತಾನದಲ್ಲಿ ಸ್ಟಾರ್ ಬ್ಯಾಟರ್ಗಳಾಗಿರುವ ಬಾಬರ್ ಅಜಂ ಮತ್ತು ರಿಜ್ವಾನ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಇಬ್ಬರ ಆಟದ ಸಾಮರ್ಥ್ಯದಿಂದಲೇ ಪಾಕಿಸ್ತಾನ ಕಪ್ ಗೆಲ್ಲುವ ಫೇವರೆಟ್ ತಂಡಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಜಂರನ್ನು ಕಟ್ಟಿ ಹಾಕಲು ಭಾರತ ಉತ್ತಮ ಬೌಲಿಂಗ್ ಪಡೆಯನ್ನೇ ಅಂಗಣಕ್ಕಿಳಿಸಬೇಕಿದೆ.