ಅಡಿಲೇಡ್(ಆಸ್ಟ್ರೇಲಿಯಾ): ಭಾರತ ಹಾಗೂ ಬಾಂಗ್ಲಾದೇಶದ ಸೆಮಿಸ್ ಹಾದಿ ಸುಗಮವಾಗಲು ಇಂದಿನ ಪಂದ್ಯ ಅತ್ಯಂತ ಮಹತ್ವದ್ದು. ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದು ದ.ಆಫ್ರಿಕಾ ತಂಡದೆದುರು ಕಳಪೆ ಕ್ಷೇತ್ರರಕ್ಷಣೆಯಿಂದ ಸೋಲನುಭವಿಸಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತು 4 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.
ಭಾರತ ಮತ್ತು ಬಾಂಗ್ಲಾ 2016ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಸಂದರ್ಭದಲ್ಲಿ ಭಾರತ 1 ರನ್ ಮೂಲಕ ರೋಚಕ ಜಯ ದಾಖಲಿಸಿತ್ತು. ಮೂರು ವರ್ಷಗಳ ಹಿಂದೆ ಉಭಯ ದೇಶಗಳು ದ್ವಿಪಕ್ಷೀಯ ಸರಣಿಯನ್ನೂ ಆಡಿದ್ದವು.
ಲಯ ಕಂಡುಕೊಳ್ಳುವರೇ ರಾಹುಲ್?:ಭಾರತ ಕಳೆದ ಮೂರು ಪಂದ್ಯದಲ್ಲಿ ಉತ್ತಮ ಆರಂಭವನ್ನು ಕಂಡಿಲ್ಲ. ಕೆ ಎಲ್ ರಾಹುಲ್ ಸತತವಾಗಿ ನಿರಾಶೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 4 ಮತ್ತು ಬಾಕಿ ಎರಡರಲ್ಲಿ 9, 9 ರನ್ ಗಳಿಸಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಇಂದು ದಿನೇಶ್ ಕಾರ್ತಿಕ್ ಆಡುತ್ತಾರಾ?: ಭಾನುವಾರ ಹರಿಣಗಳ ನಡುವಣ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬೆನ್ನು ನೋವಿಗೆ ತುತ್ತಾಗಿದ್ದರು. ಪಂತ್ ಕೀಪಿಂಗ್ ಗ್ಲೌಸ್ ತೊಟ್ಟು ವಿಕೆಟ್ ಹಿಂದೆ ಐದಾರು ಓವರ್ ಆಡಿದ್ದರು. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ನಿನ್ನೆ ಹೇಳಿಕೆ ನೀಡಿದ್ದು ವೈದ್ಯರ ಸಲಹೆ ಮೇರೆಗೆ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ. ಆದರೂ ಡಿಕೆ ಮೈದಾನಕ್ಕಿಳಿಯುವ ಬಗ್ಗ ಸಂದೇಹಗಳಿವೆ.
ಪಂತ್‌ಗೆ ಅವಕಾಶ ಸಾಧ್ಯತೆ:ರಿಷಭ್ ಪಂತ್ ಕೀಪರ್ ಜೊತೆಗೆ ಆರಂಭಿಕ ಆಟಗಾರರಾಗಿಯೂ ತಂಡದಲ್ಲಿ ಗುರುತಾಗಿದ್ದಾರೆ. ರಾಹುಲ್ರ ವೈಫಲ್ಯಕ್ಕೆ ಬದಲಿ ಆಟಗಾರರಾಗಿ ಪಂತ್ ಕ್ರೀಡಾಂಗಣಕ್ಕೆ ಇಳಿಯಲಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಶೈನ್ ಆಗಬೇಕಿದೆ ದೀಪಕ್ ಹೂಡಾ:ದೀಪಕ್ ಹೂಡಾ ಮೇಲೆ ಹೊಡಿಬಡಿ ಆಟದ ನಿರೀಕ್ಷೆ ಇದ್ದು ಹೆಚ್ಚಿನ ಒತ್ತಡವೂ ಇದೆ. ತಂಡ ವಿಕೆಟ್ ಕಳೆದುಕೊಂಡಾಗ ಭಾರತ ಈಗ ವಿರಾಟ್, ಸೂರ್ಯ ಮತ್ತು ಹಾರ್ದಿಕ್‌ರನ್ನು ನೆಚ್ಚಿಕೊಂಡಂತಿದೆ. ಹಾಗೆಯೇ ಹೂಡಾರನ್ನು ನಾಯಕ ಆಲ್ರೌಂಡ್ ಪ್ರದರ್ಶನಕ್ಕೆ ಇಳಿಸುವ ಅಗತ್ಯವೂ ಇದೆ. ಬ್ಯಾಟಿಂಗ್ನಲ್ಲಿ ಸಿಗದ ಚಾರ್ಮ್ ಬೌಲಿಂಗ್ನಲ್ಲಿ ಹುಡುಕಬೇಕು.
ವಿರಾಟ್, ಸೂರ್ಯ ಮತ್ತು ಹಾರ್ದಿಕ್ ಬಲ:ಭಾರತ ತಂಡದ ಬಲ ಸದ್ಯ ವಿರಾಟ್, ಸೂರ್ಯ ಮತ್ತು ಹಾರ್ದಿಕ್ ಪಾಂಡ್ಯಾ ಆಟದ ಮೇಲೆ ನಿಂತಿದೆ. ಈ ಆಧಾರದ ಜತೆಗೆ ಎಲ್ಲರ ಸಾಂಘಿಕ ಪ್ರದರ್ಶನದ ಅಗತ್ಯ ತಂಡಕ್ಕಿದೆ. ನಾಯಕ ರೋಹಿತ್ ನಿರಂತರತೆ ಕಾಪಾಡಿಕೊಳ್ಳಬೇಕಿದೆ.
ಬೌಲಿಂಗ್ ಪ್ರದರ್ಶನ ಹೇಗಿದೆ?:ವೇಗ ಮತ್ತು ಸ್ಪಿನ್ ವಿಭಾಗ ತಮ್ಮ ಆಟವನ್ನು ಉತ್ತಮವಾಗಿ ಪ್ರದರ್ಶಿಸುತ್ತಿದೆ. ಭುವನೇಶ್ವರ್ ಮತ್ತು ಶಮಿ ಜೋಡಿ ಮಾರಕ ಸ್ಪೆಲ್ ಮಾಡುತ್ತಿದ್ದು, ಹಾರ್ದಿಕ್ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್ಗೆ ಇಂದು ದೀಪಕ್ ಬೆಂಬಲ ಸಿಗುವ ಸಾಧ್ಯತೆ ಕಾಣುತ್ತಿದೆ.