ಟಿ20 ವಿಶ್ವಕಪ್ ಸಿದ್ಧತಾ ಭಾಗವಾಗಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸೀಸ್ ಗೆಲುವಿನ ತುದಿಯಲ್ಲಿ ಎಡವಿ 180 ರನ್ಗೆ ಆಲೌಟ್ ಆಗಿ ಸೋತಿತು.
186 ರನ್ಗಳ ಸವಾಲಿನ ಮೊತ್ತ ಬೆಂಬತ್ತಿದ ಕಾಂಗರೂ ಪಡೆಗೆ ನಾಯಕ ಆ್ಯರೋನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಅದ್ಭುತ ಆರಂಭ ನೀಡಿದರು. ಇನಿಂಗ್ಸ್ ಆರಂಭಿಸಿದ ಇಬ್ಬರು ಮಿಂಚಿನ ಬ್ಯಾಟಿಂಗ್ ಮಾಡಿದರು. 35 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಹೈ ಹಾಕಿದ ಮಾರ್ಷ್ ಭುವನೇಶ್ವರ್ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಬಳಿಕ ತಂಡದ ಗೆಲುವಿನ ಹೊಣೆ ಹೊತ್ತ ಫಿಂಚ್ (76) ಬಿರುಸಿನ ಅರ್ಧಶತಕ ಸಿಡಿಸಿದರು. ಸ್ವೀವನ್ ಸ್ಮಿತ್ 11, ಗ್ಲೆನ್ ಮ್ಯಾಕ್ಸ್ವೆಲ್ 23 ರನ್ ಗಳಿಸಿದರು.
ಆಸೀಸ್ ದಿಢೀರ್ ಪತನ:ಆ್ಯರೋನ್ ಫಿಂಚ್ರ ಹೋರಾಟದಿಂದ ಗೆಲುವಿನ ದಡದಲ್ಲಿದ್ದ ಆಸ್ಟ್ರೇಲಿಯಾ ಡೆತ್ ಓವರ್ನಲ್ಲಿ ದಿಢೀರ್ ಪತನ ಕಂಡಿತು. 5 ವಿಕೆಟ್ಗೆ 171 ಗಳಿಸಿದ್ದಾಗ ತಂಡ ಗೆಲ್ಲಲು 17 ರನ್ ಮಾತ್ರ ಅಗತ್ಯವಿತ್ತು. ಈ ವೇಳೆ ಮಿಂಚಿನ ದಾಳಿ ನಡೆಸಿದ ಭಾರತೀಯರು ಕೊನೆಯ 5 ವಿಕೆಟ್ಗಳನ್ನು ಕೇವಲ 10 ರನ್ಗಳ ಅಂತರದಲ್ಲಿ ಉರುಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಗೆಲುವಿನ ಹೊಸ್ತಿಲಲ್ಲಿ 180 ರನ್ಗೆ ಸರ್ವಪತನ ಕಂಡಿತು.
ಶಮಿ ಸೂಪರ್ ಓವರ್:20 ನೇ ಓವರ್ ಎಸೆಯಲು ಬಂದ ಜಸ್ಪ್ರೀತ್ ಬೂಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಹಿರಿಯ ವೇಗಿ ಮೊಹಮದ್ ಶಮಿ ಕಾಂಗರೂಗಳ ಪತನಕ್ಕೆ ಕಾರಣವಾದರು. ಕೊನೆಯ 6 ಎಸೆತಗಳಲ್ಲಿ ಗೆಲುವಿಗೆ 11 ರನ್ ಬೇಕಿತ್ತು. ದಾಳಿಗಿಳಿದ ಶಮಿ ಮೊದಲ 2 ಎಸೆತಗಳಲ್ಲಿ 4 ರನ್ ನೀಡಿದರೆ, ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದರು. ಇದರಲ್ಲಿ ಒಂದು ರನೌಟ್ ಮಾಡಿದರು. ಭುವನೇಶ್ವರ ಕುಮಾರ್ 2, ಅರ್ಷದೀಪ್ ಸಿಂಗ್ 1 ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.