ಸಿಡ್ನಿ:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಗಳಿಸಿ ಶುಭಾರಂಭ ಮಾಡಿದೆ. ಆದರೆ, ಮುಂದಿನ ಪಂದ್ಯಕ್ಕೂ ಮುನ್ನ ರೋಹಿತ್ ಪಡೆಗೆ ಆತಂಕ ಎದುರಾಗಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ನಿರ್ಣಾಯಕ ಜೊತೆಯಾಟವಾಡಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯವುದು ಅನುಮಾನ ಎನ್ನಲಾಗುತ್ತಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 37 ಎಸೆತಗಳಲ್ಲಿ 40 ರನ್ ಬಾರಿಸಿ 19ನೇ ಓವರ್ನಲ್ಲಿ ಔಟಾಗಿದ್ದರು. ವಿಸ್ತಾರವಾದ ಬೌಂಡರಿ ಲೈನ್ ಹೊಂದಿರುವ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಸಿಡಿಸುವುದು ಸುಲಭವಲ್ಲ. ಹೀಗಾಗಿ ಬ್ಯಾಟರ್ಗಳು ಸಿಂಗಲ್, ಡಬಲ್ ಹಾಗೂ ತ್ರಿಬಲ್ ಮೂಲಕವೇ ರನ್ ಪೇರಿಸುವುದು ಅನಿವಾರ್ಯವಾಗಿದೆ. ಅದರಂತೆ 40 ರನ್ಗಳಲ್ಲಿ ಪಾಂಡ್ಯ 24 ರನ್ಗಳನ್ನು ಓಡಿ ಕಲೆಹಾಕಿದ್ದರು. ಇದರಿಂದ ಕೊಂಚ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಬೌಲಿಂಗ್ನಲ್ಲೂ ಮಿಂಚಿದ್ದ ಹಾರ್ದಿಕ್ 3 ವಿಕೆಟ್ ಪಡೆದಿದ್ದರು. ಅಲ್ಲದೇ, ಸಿಡ್ನಿಯಲ್ಲಿ ನಡೆದ ಅಭ್ಯಾಸದ ವೇಳೆಯೂ ಕೂಡ ಹಾರ್ದಿಕ್ ಪಾಂಡ್ಯಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ನೆದರ್ಲ್ಯಾಂಡ್ಸ್ ತಂಡವು ಅಷ್ಟೇನು ಬಲಿಷ್ಠವಲ್ಲದ ಕಾರಣ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದ್ದು, ದೀಪಕ್ ಹೂಡಾ ಇತರರು ಕಣಕ್ಕಿಳಿಯುವ ಸಾಧ್ಯತೆ ಇದೆ.