ಮೆಲ್ಬೋರ್ನ್:ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಹಣಾಹಣಿ ಇಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ.
ಟೂರ್ನಿಯ ಸೆಮೀಸ್ಗಳಲ್ಲಿ ಪಾಕ್ ತಂಡ ನ್ಯೂಜಿಲೆಂಡ್ಗೆ ಸೋಲುಣಿಸಿದರೆ, ಇಂಗ್ಲೆಂಡ್ ಪಡೆಯು ಭಾರತವನ್ನು ಮಣಿಸಿ ಫೈನಲ್ ಪ್ರವೇಶಿಸಿವೆ. ಈಗಾಗಲೇ ತಲಾ ಒಮ್ಮೆ ಪ್ರಶಸ್ತಿ ಗೆದ್ದಿರುವ ಉಭಯ ತಂಡಗಳ ನಡುವೆ ಸಮಬಲದ ಹೋರಾಟದ ನಿರೀಕ್ಷೆ ಎಲ್ಲರಲ್ಲಿದೆ. ವಿಶೇಷವೆಂದರೆ ಮೆಲ್ಬೋರ್ನ್‌ನ ಐತಿಹಾಸಿಕ ಅಂಗಳದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳೆರಡೂ ಸಹ ಇದುವರೆಗೂ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನೇ ಗೆದ್ದಿಲ್ಲ. ಆದರೀಗ ಯಾವುದಾದರೂ ತಂಡ ಗೆದ್ದು ಗೆಲುವಿನ ಖಾತೆ ತೆರೆಯಲಿದೆ.
ಅಲ್ಲದೆ, ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ವಿರುದ್ಧ 30 ವರ್ಷಗಳ ಹಿಂದಿನ ವಿಜಯವನ್ನು ಪುನರಾವರ್ತಿಸುವ ಅವಕಾಶವಿದೆ. 1992ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಪಾಕ್ ತಂಡ ಆಂಗ್ಲರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಅಂದು ಇಮ್ರಾನ್ ಖಾನ್ ಬಳಗ ಮಾಡಿದ್ದ ಸಾಧನೆಯನ್ನು ಇಂದಿನ ಬಾಬರ್ ಪಡೆ ಪುನರಾವರ್ತಿಸುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.