ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದ ಕ್ರಿಕೆಟ್ ಶಿಶು ಜಿಂಬಾಬ್ವೆ ಮತ್ತೊಂದು ಗೆಲುವಿನ ಹೊಸ್ತಿಲಲ್ಲಿ ಎಡವಿತು. ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 3 ರನ್ನಿಂದ ಪರಾಭವಗೊಂಡಿತು. ಇದು ಪಾಕ್ ವಿರುದ್ಧದ ಪಂದ್ಯದ ರೋಚಕತೆಯನ್ನೇ ಮರುಕಳಿಸಿತು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 7 ವಿಕೆಟ್ಗೆ 150 ರನ್ ಗಳಿಸಿತು. ಸವಾಲಿನ ಗುರಿ ಚೇಸ್ ಮಾಡಿದ ಜಿಂಬಾಬ್ವೆ ದಿಟ್ಟ ಹೋರಾಟ ನೀಡಿ 8 ವಿಕೆಟ್ಗೆ 147 ರನ್ ಮಾಡಿತು. ಬಾಂಗ್ಲಾ ಟೈಗರ್ಸ್ 3 ರನ್ನಿಂದ ಗೆದ್ದು ಅಂಕ ಪಟ್ಟಿಯಲ್ಲಿ 4 ಅಂಕಗಳೊಂದಿಗೆ 2 ನೇ ಸ್ಥಾನಕ್ಕೆ ಜಿಗಿಯಿತು.
ಸೀನ್ ವಿಲಿಯಮ್ಸ್ ಏಕಾಂಗಿ ಫೈಟ್:ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ಕ್ರೇಗ್ ಇರ್ವಿನ್ ಪಡೆ ಬಾಂಗ್ಲಾದೇಶ ವಿರುದ್ಧವೂ ಮತ್ತೊಂದು ಶಾಕಿಂಗ್ ಇನಿಂಗ್ಸ್ ಕಟ್ಟಿತು. ಆರಂಭಿಕರು ಕೈಕೊಟ್ಟರೂ ಏಕಾಂಗಿ ಹೋರಾಟ ನಡೆಸಿದ ಸೀನ್ ವಿಲಿಯಮ್ಸ್ 42 ಎಸೆತಗಳಲ್ಲಿ 8 ಬೌಂಡರಿ ಸಮೇತ 64 ರನ್ ಚಚ್ಚಿದರು. ರೇಗಿಸ್ ಚಕಬ್ವಾ 15, ರ್ಯಾನ್ ಬರ್ಲ್ ಔಟಾಗದೇ 27 ರನ್ ಗಳಿಸಿದರು. ಪಂದ್ಯ ಗೆಲ್ಲಲು 8 ಎಸೆತಗಳಲ್ಲಿ 16 ರನ್ ಅಗತ್ಯವಿದ್ದಾಗ ಸೀನ್ ವಿಲಿಯಮ್ಸ್ ರನೌಟ್ ಆದರು.