ಅಬುಧಾಬಿ :ವಿಶ್ವ ಚುಟುಕು ಸಮರಕ್ಕೆ ಇಂದು ಚಾಲನೆ ಸಿಕ್ಕಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿಯಾಗಿವೆ. ಬಲಾಢ್ಯ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದರೆ, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬಾವುಮಾ ಬಾಟಿಂಗ್ ಆರಿಸಿಕೊಂಡಿದ್ದರು.
ಉತ್ತಮ ಆರಂಭ ಪಡೆದ ದಕ್ಷಿಣ ಆಫ್ರಿಕಾ ತನ್ನ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಹರಿಣಗಳ ಭರವಸೆಯ ಆಟಗಾರ ತೆಂಬಾ ಬಾವುಮಾ (12 ರನ್) ಸಣ್ಣ ಮೊತ್ತ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರೆ, ಅವರೊಂದಿಗೆ ಕ್ರೀಸ್ಗೆ ಇಳಿದಿದ್ದ ಕ್ವಿಂಟನ್ ಡಿ ಕಾಕ್ ಕೇವಲ 7 ರನ್ ಗಳಿಸಿ ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್ ದಾಳಿಗೆ ಔಟ್ ಆಗುವ ಮೂಲಕ ಪೆವಿಲಿಯನ್ಗೆ ತೆರಳಿದರು.
ಬಳಿಕ ಕ್ರೀಸ್ಗೆ ಇಳಿದ ರಾಸ್ ವ್ಯಾನ್ ಡಸೆನ್ ಕೇವಲ 2 ರನ್ ಗಳಿಸಿ ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರ ನಡೆದರು. ಏಡನ್ ಮಾರ್ಕ್ರಮ್ (40) ಅವರ ಜೊತೆಯಾದ ಹೆನ್ರಿಕ್ ಕ್ಲಾಸೆನ್ (13) ಸ್ವಲ್ಪ ಕಾಲ ಕ್ರೀಸ್ನಲ್ಲಿ ಭರಸವೆಯ ಬ್ಯಾಟಿಂಗ್ ಮಾಡಿದರು. ಆದರೆ, ಹೆನ್ರಿಕ್ ಬಹಳ ಹೊತ್ತು ಕ್ರೀನ್ನಲ್ಲಿ ನಿಲ್ಲಲಿಲ್ಲ. 10 ಓವರ್‌ಗಳು ಮುಗಿದಾಗ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತ್ತು.
ಹೆನ್ರಿಕ್ ಕ್ಲಾಸೆನ್ ಬಳಿಕ ಬ್ಯಾಟಿಂಗ್ ಮಾಡಲು ಬಂದ ಡೇವಿಡ್ ಮಿಲ್ಲರ್ (16) ಹಾಗೂ ಡ್ವೇನ್ ಪ್ರಿಟೋರಿಯಸ್ (1) ಅಲ್ಪ ಮೊತ್ತದ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು. ಬಳಿಕ ಬಂದ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಯಾವುದೇ ಆಟಗಾರರು ಬೆರಳಣಿಕೆಯ ಮೊತ್ತ ಗಳಿಗೆಕೆ ಮಾತ್ರ ಸೀಮಿತರಾದರು. ಅಂತಿಮವಾಗಿ, 20 ಓವರ್ಗಳಲ್ಲಿ ತೆಂಬಾ ಬಾವುಮಾ ಬಳಗ 118 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‌ವುಡ್ 2, ಆ್ಯಡಮ್ ಜಂಪಾ 2 ಮತ್ತು ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 1 ವಿಕೆಟ್ ಪಡೆದರು.