ಮೆಲ್ಬರ್ನ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿವೆ. ಮಳೆಯಿಂದ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ರದ್ದಾದಂತೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಪಂದ್ಯವೂ ವರ್ಷಧಾರೆಗೆ ಕೊಚ್ಚಿ ಹೋಯಿತು. ಇದು ಕ್ರಿಕೆಟ್‌ಪ್ರಿಯರನ್ನು ನಿರಾಶೆಗೊಳಿಸಿದೆ.
ಮೆಲ್ಬರ್ನ್ನಲ್ಲಿ ಗ್ರೂಪ್ 1ರ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡೂ ಪಂದ್ಯಗಳು ನಡೆಯಬೇಕಿತ್ತು. ಆದರೆ, ನಿರಂತರ ಮಳೆಯಿಂದಾಗಿ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಬೇಕಿದ್ದ ಮೊದಲ ಪಂದ್ಯವನ್ನು ರದ್ದು ಮಾಡಲಾಗಿತ್ತು.
ಮತ್ತೊಂದೆಡೆ, ಸೆಮಿಫೈನಲ್ಸ್ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಣಸಾಡಬೇಕಿತ್ತು. ಆದರೆ, ಈ ಪಂದ್ಯದ ಟಾಸ್ ಕೂಡ ನಡೆಯದೇ, ಒಂದೇ ಒಂದು ಎಸೆತವನ್ನೂ ಕಾಣದೆ ರದ್ದಾಯಿತು.
ಈಗಾಗಲೇ ತಲಾ ಒಂದು ಪಂದ್ಯವನ್ನು ಸೋತಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಇಂದಿನ ಪಂದ್ಯದಲ್ಲಿ ಗೆದ್ದು ತಮ್ಮ ನೆಟ್ ರನ್‌ರೇಟ್ ಹಾಗು ಅಂಕಗಳನ್ನು ಹೆಚ್ಚಿಕೊಳ್ಳುವ ತವಕದಲ್ಲಿದ್ದವು. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್ ತಲಾ 2 ಪಾಯಿಂಟ್ಗಳನ್ನು ಹೊಂದಿದ್ದವು. ಇಂಗ್ಲೆಂಡ್ ಪ್ಲಸ್ 0.239 ರನ್‌ರೇಟ್‌ನೊಂದಿಗೆ ಗ್ರೂಪ್ 1ರಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ ಮೈನಸ್ 1.555 ರನ್‌ರೇಟ್‌ನೊಂದಿಗೆ ಐದನೇ ಸ್ಥಾನದಲ್ಲಿತ್ತು.
ಪಂದ್ಯ ರದ್ದಾಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ದೊರೆತಿದೆ. ಆದ್ದರಿಂದ ಇಂಗ್ಲೆಂಡ್ ನಾಲ್ಕನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದ್ದು, ಆಸ್ಟ್ರೇಲಿಯಾ ಐದರಿಂದ ಒಂದೇ ಸ್ಥಾನ ಮೇಲೇರಿ ನಾಲ್ಕನೇ ಸ್ಥಾನ ಪಡೆದಿದೆ. ಈಗಾಗಲೇ 3 ಪಾಯಿಂಟ್ಗಳನ್ನು ಹೊಂದಿರುವ ನ್ಯೂಜಿಲೆಂಡ್ ತಂಡ ಪ್ಲಸ್ 4.450 ರನ್‌ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆರಿದೆ.
ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಐರ್ಲೆಂಡ್ ಮತ್ತು ಅಪ್ಘಾನಿಸ್ತಾನ ತಂಡವನ್ನೂ, ಇಂಗ್ಲೆಂಡ್ ತಂಡವು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.
ಇದನ್ನೂ ಓದಿ:T20 ವಿಶ್ವಕಪ್: ಅಫ್ಘಾನಿಸ್ತಾನದ ಎರಡನೇ ಪಂದ್ಯವೂ ಮಳೆಯಿಂದ ರದ್ದು