ಅಬುಧಾಬಿ : ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಮೊದಲನೇ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕಾಂಗರೋ ಪಡೆ 5ವಿಕೆಟ್ಗಳ ಭರ್ಜರಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇತ್ತ ಇಂದು ಎರಡನೇ ಪಂದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮದ್ಯೆ ನಡೆಯಲಿದೆ.
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳೆರಡೂ ತಲಾ 2 ಅಭ್ಯಾಸ ಪಂದ್ಯಗಳಲ್ಲಿ ಆಡಿವೆ.
ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಕಣಕ್ಕಿಳಿದಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಟೀಮ್ ಇಂಡಿಯಾ ವಿರುದ್ಧ ಸೋಲು ಕಂಡಿತ್ತು. ಅತ್ತ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು. ಹಾಲಿ ಟಿ-20 ವಿಶ್ವಕಪ್ ಚಾಂಪಿಯನ್ಸ್ ಈ ಎರಡೂ ಪಂದ್ಯಗಳಲ್ಲಿಯೂ ಸಹ ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು.
ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ ಒಟ್ಟು 18 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ವೆಸ್ಟ್ ಇಂಡೀಸ್ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ಕೇವಲ 7 ಪಂದ್ಯಗಳಲ್ಲಿ ಜಯ ಗಳಿಸಿದೆ.