ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2024ರ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ಜೂನ್ 5ರಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9ರಂದು ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.
ಚುಟುಕು ವಿಶ್ವ ಸಮರವನ್ನು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಸಹಯೋಗದಲ್ಲಿ ಆಯೋಜಿಸಲಾಗಿದೆ. ಒಟ್ಟು 20 ತಂಡಗಳು ಪಾಲ್ಗೊಳ್ಳುತ್ತಿವೆ. ತಲಾ ಐದು ತಂಡಗಳನ್ನೊಳಗೊಂಡ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ತಂಡ ತನ್ನ ಗುಂಪಿನ ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ.
ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಅತಿದೊಡ್ಡ ಟೂರ್ನಿಯಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಆವತ್ತಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಈ ಬಾರಿ ಕೆನಡಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್, ಪಪುವಾ ನ್ಯೂಗಿನಿಯಾ, ಉಗಾಂಡಾ ಮತ್ತು ನೇಪಾಳ ತಂಡಗಳು ಅರ್ಹತೆ ಪಡೆದಿವೆ.
ಜೂನ್ 1ರಿಂದ ಟೂರ್ನಿ ಶುರು: ಲೀಗ್ ಹಂತದ ಪಂದ್ಯಗಳಿಗಾಗಿ 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಯುಎಸ್ಎ ತಂಡಗಳಿವೆ. ಡಲ್ಲಾಸ್‌ನಲ್ಲಿ ಜೂನ್ 1ರಂದು ಯುಎಸ್ಎ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗಲಿದೆ. ಗುಂಪು ಹಂತದ ಪಂದ್ಯಗಳು ಜೂನ್ 1ರಿಂದ 18ರವರೆಗೆ ನಡೆಯಲಿವೆ. ಸೂಪರ್ 8 ಪಂದ್ಯಗಳು ಜೂನ್ 19ರಿಂದ 24ರವರೆಗೆ ಜರುಗಲಿವೆ.