ಶಾರ್ಜಾ: ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಸಾಧಿಸಿ ವೆಲಾಸಿಟಿ ವಿರುದ್ಧ ಭರ್ಜರಿ ಜಯ ಗಳಿಸಿದ ಟ್ರೈಲ್ಬ್ಲೇಜರ್ಸ್ ತಂಡದ ನಾಯಕಿ ಸ್ಮೃತಿ ಮಂಧಾನ ತಮ್ಮ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಪಂದ್ಯದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲಾ ಬೌಲರ್ಗಳಿಗೆ ಸ್ಟಂಪ್ ಲೈನ್ಗೆ ಆಡಿಸುವಂತೆ ಹೇಳಿದೆ. ಅವರು ಸಹ ಅದೇ ರೀತಿ ಬೌಲಿಂಗ್ ದಾಳಿ ನಡೆಸಿದರು. ನಮ್ಮಲ್ಲಿ ಉತ್ತಮ ಸ್ಪಿನ್ ದಾಳಿ ಇದೆ. ನಾನು ಐಪಿಎಲ್ನ್ನು ಅನುಸರಿಸುತ್ತಿದ್ದು, ನಾವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಅಂತಾ ಭಾವಿಸಿದ್ದೇನೆ ಎಂದು ಸ್ಮೃತಿ ಮಂಧಾನ ಹೇಳಿದರು.
ನಾವು ವಿಕೆಟ್ ಪಡೆದುಕೊಳ್ಳಲು ಬಯಸಿದ್ದರಿಂದ ಮಿಥಾಲಿ ಅವರ ನಿರ್ಧಾರದಿಂದ (ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ) ನನಗೆ ಸಂತೋಷವಾಯಿತು. ಇದು ಉತ್ತಮ ಆಟವಾಗಿತ್ತು. ಏಳು ತಿಂಗಳ ವಿರಾಮದ ನಂತರ ನಾವು ಕ್ರಿಕೆಟ್ ಆಡಲು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದು ನಾಯಕಿ ಮಂಧಾನ ತಿಳಿಸಿದರು.
ವೈಯಕ್ತಿಕವಾಗಿ ನಾನು ಡ್ಯಾನಿ ಮತ್ತು ಶಫಾಲಿ ಜೊತೆಯಾಟ ಇಷ್ಟಪಡುತ್ತೇನೆ. ಅವರಿಬ್ಬರು ಬೃಹತ್ ಮೊತ್ತದ ಜೊತೆಯಾಟ ಆಡುವುದು ನನಗೆ ಇಷ್ಟ. ಏಕೆಂದರೆ ಅವರು ನಮ್ಮ ಬ್ಯಾಟಿಂಗ್ ಸಾಲಿಗೆ ಪ್ರಮುಖ ಆಟಗಾರರಾಗಿದ್ದು, ನಮಗೆ ಉತ್ತಮ ಪ್ರಾರಂಭ ದೊರೆಯುವುದರಲ್ಲಿ ಅವರ ಜೊತೆಯಾಟ ಮುಖ್ಯವಾಗಿದೆ. ದುರಾದೃಷ್ಟವಶಾತ್ ಎರಡೂ ಪಂದ್ಯಗಳಲ್ಲಿ ನಾವು ಅದನ್ನು ಕಾಣಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ 15.1 ಓವರ್ಗಳಲ್ಲಿ ಕೇವಲ 47 ರನ್ಗಳಿಗೆ ಆಲೌಟ್ ಆಗಿತ್ತು. ಈ ಸಣ್ಣ ಮೊತ್ತವನ್ನು ಟ್ರೈಲ್ಬ್ಲೇಜರ್ಸ್ ತಂಡ ಕೇವಲ 7.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು. ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಟ್ರೈಲ್ ಬ್ಲೇಜರ್ಸ್ ತಂಡದ ಜೂಲನ್ ಗೋಸ್ವಾಮಿ 2 ವಿಕೆಟ್, ಸ್ಪಿನ್ನರ್ಗಳಾದ ಸಫೀ ಎಕ್ಲೆಸ್ಟೋನ್ 9ಕ್ಕೆ 4 ಹಾಗೂ ಗಾಯಕ್ವಾಡ್ 13ಕ್ಕೆ 2 ವಿಕೆಟ್ ಪಡೆದು ಮಿಂಚಿದ್ದರು.