ದುಬೈನಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ 2021ರ ಆರಂಭಿಕ ಪಂದ್ಯದಲ್ಲಿ ಭಾರತ ಸೋತ ನಂತರ ವೇಗಿ ಮೊಹಮ್ಮದ್ ಶಮಿ ನೆಟ್ಟಿಗರ ನಿಂದನೆಗೆ ಒಳಗಾಗಿದ್ದಾರೆ. ಇದೇ ವೇಳೆ, ಭಾರತ ತಂಡದ ಮಾಜಿ, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಸೇರಿದಂತೆ ಅನೇಕರು ಶಮಿ ಬೆನ್ನಿಗೆ ನಿಂತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಶಮಿ ಪರವಾಗಿರುವ ಹಳೆಯ ವಿಡಿಯೋ ಹರಿದಾಡುತ್ತಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪರಾಜಯ ಅನುಭವಿಸಿತ್ತು. ಲಂಡನ್‌ನ ಓವಲ್‌ನಲ್ಲಿ ನಡೆದ ಪಂದ್ಯ ಮುಗಿಸಿ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಪಾಕ್ ಅಭಿಮಾನಿಯೊಬ್ಬ ‘ಬಾಪ್ ಕೌನ್ ಹೈ, ಬಾಪ್ ಕೌನ್ ಹೈ ’ ಎಂದು ಪದೇ ಪದೇ ಹೇಳುತ್ತಿದ್ದ. ಇದನ್ನು ಗಮನಿಸಿದ ಶಮಿ ತಾಳ್ಮೆ ಕಳೆದುಕೊಂಡಿದ್ದರು. ಆ ಅಭಿಮಾನಿ ಬಳಿ ಬಂದ ಶಮಿ ಕೆಲವೊಮ್ಮೆ ಕೆಟ್ಟದಿನಗಳು ಎಲ್ಲರಿಗೂ ಬರುತ್ತವೆ ಎಂದು ಹೇಳಿದ್ದರು. ಆಗ ಎಂ.ಎಸ್.ಧೋನಿ ಮಧ್ಯಪ್ರವೇಶಿಸುವ ಮೂಲಕ ಶಮಿ ಶಾಂತರಾಗಿ ಡ್ರೆಸ್ಸಿಂಗ್ ರೂಂನತ್ತ ಹೆಜ್ಜೆ ಹಾಕಿದರು.